ನೂರಾರು ಅರೋಗ್ಯ ಸಮಸ್ಯೆಗಳಿಗೆ ಒಂದೇ ಪರಿಹಾರ ‘ತೆಂಗಿನಕಾಯಿ’..!

ತೆಂಗಿನ ಮರವನ್ನು ಕಲ್ಪವೃಕ್ಷ ಎನ್ನುತ್ತಾರೆ, ಅದು ಅಕ್ಷರ ಸಹ ಸತ್ಯ ತೆಂಗು ಬಹುಪಯೋಗಿ ಸಸ್ಯಜಾತಿ.  ಎಳನೀರು, ಹಸಿ ಕೊಬ್ಬರಿ , ಒಣ ಕೊಬ್ಬರಿ, ಈ ತೆಂಗಿನ ಮರದ ಉತ್ಪನ್ನಗಳು ಆರೋಗ್ಯಕ್ಕೆ ಬಹು ಅವಶ್ಯಕವಷ್ಟೇ ಅಲ್ಲ ಅಷ್ಟೇ ಆರೋಗ್ಯದಾಯಕವಾಗಿವೆ. ಕೊಬ್ಬರಿ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಎಂಬುದನ್ನು ಈ ಕೆಳಗೆ ನೀವೇ ಓದಿ ತಿಳಿದುಕೊಳ್ಳಿ.

# ಹಸಿ ಕೊಬ್ಬರಿಯಿಂದ ಹಾಲು ತೆಗೆದು ಗ್ಲಿಸರಿನ್‍ನೊಂದಿಗೆ ಮಿಶ್ರ ಮಾಡಿ ಅಂಗೈ ಅಂಗಾಲುಗಳಿಗೆ ಹಚ್ಚಿದರೆ ಚರ್ಮ ಮೃದುವಾಗುತ್ತದೆ. ಒಣ ಕೊಬ್ಬರಿ ಮತ್ತು ಕಲ್ಲು ಸಕ್ಕರೆ ಮೆಲ್ಲುವುದರಿಂದ ಬಾಯಿ ಹುಣ್ಣುಗಳು ನಿವಾರಣೆಯಾಗುತ್ತವೆ. ಹಸಿ ಕೊಬ್ಬರಿ ಮತ್ತು ಬೆಲ್ಲವನ್ನು ಮಕ್ಕಳಿಗೆ ತಿನ್ನಲಿಕ್ಕೆ ನೀಡುವುದು ಒಳ್ಳೆಯದು. ಕೊಬ್ಬರಿ ಬೆಲ್ಲ ಚೆನ್ನಾಗಿ ಅಗಿದು ತಿಂದರೆ ವಸಡು ಗಟ್ಟಿಯಾಗುತ್ತದೆ ಮತ್ತು ದಂತಕ್ಷಯಕ್ಕೆ ತಡೆಯುಂಟಾಗುತ್ತದೆ.

# ಗಸಗಸೆಯನ್ನು ನೀರಿನಲ್ಲಿ ನೆನೆಹಾಕಿ, ಚೆನ್ನಾಗಿ ಅರೆಯಬೇಕು. ಕೊಬ್ಬರಿ ತುರಿ ಹಿಂಡಿ ಹಾಲು ತೆಗೆಯಿರಿ. ಗಸಗಸೆ ಹಾಲು, ತೆಂಗಿನ ಹಾಲು ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ ಜೇನುತುಪ್ಪದೊಂದಿಗೆ ಪ್ರತಿದಿನ ರಾತ್ರಿ ಸೇವಿಸಬೇಕು. ಅತಿ ಧೂಮಪಾನದಿಂದ ಹುಟ್ಟುವ ಕೆಮ್ಮು, ಎದೆ ನೋವು, ನಿದ್ರಾನಾಶ, ಆಮಶಂಕೆ, ಅತಿಸಾರ – ಈ ರೋಗಗಳಲ್ಲಿ ಉತ್ತಮ ಗುಣ ಕಂಡು ಬರುತ್ತದೆ.

# ಕೊಬ್ಬರಿ ಎಣ್ಣೆ ಉಗುರುಸುತ್ತನ್ನು ಗುಣಪಡಿಸುತ್ತದೆ. ಶುಭ್ರವಾದ ಬಟ್ಟೆಯ ಚೂರನ್ನು ಸುಣ್ಣದ ತಿಳಿಯಲ್ಲಿ ನೆನೆಹಾಕಬೇಕು. ನಂತರ, ಈ ಬಟ್ಟೆಯನ್ನು ಕಾದ ಕೊಬ್ಬರಿ ಎಣ್ಣೆಯಲ್ಲಿ ಹಾಕಿದಾಗ ಚಟಪಟ ಸದ್ದಾಗುತ್ತದೆ. ಬಳಿಕ ಬಟ್ಟೆಯನ್ನು ಹೊರತೆಗೆದು ಸಾಕಷ್ಟು ಬಿಸಿಯಾಗಿರುವಾಗಲೇ ಉಗುರು ಸುತ್ತ ಆಗಿರುವ ಬೆರಳಿನ ಮೇಲೆ ಬ್ಯಾಂಡೇಜ್ ಸುತ್ತುವಂತೆ ಸುತ್ತಿ ಕಟ್ಟು ಕಟ್ಟಿದರೆ ಗುಣಮುಖವಾಗುತ್ತದೆ.

# ಬಲಿತ ತಂಗಿನಕಾಯಿ ತುರಿದು, ಸ್ವಲ್ಪ ನೀರಿನೊಂದಿಗೆ ನುಣ್ಣಗೆ ಅರಿಯಬೇಕು. ನಂತರ ತೆಂಗಿನ ಹಾಲನ್ನು ಒಂದು ಸ್ಟೀಲ್ ಪಾತ್ರೆಗೆ ಹಿಂಡಿ, ಶೋಧಿಸಬೇಕು. ಈ ಹಾಲನ್ನು ಸಣ್ಣ ಉರಿಯ ಮೇಲಿಟ್ಟು ನಿಧಾನವಾಗಿ ಕಾಯಿಸಬೇಕು. ಕ್ರಮೇಣ ನೀರಿನ ಅಂಶ ಹಾಲಿನಿಂದ ಬೇರ್ಪಟ್ಟು ಶುದ್ಧವಾದ ಕೊಬ್ಬರಿ ಎಣ್ಣೆ ಪಾತ್ರೆಯಲ್ಲಿ ಉಳಿಯುತ್ತದೆ. ಈ ಎಣ್ಣೆಯನ್ನು ಒಂದು ಸೀಸೆಯಲ್ಲಿ ತುಂಬಿಸಬೇಕು. ಬಾಯಿಹುಣ್ಣು ಆದಾಗ ಈ ಎಣ್ಣೆಯನ್ನು ಪದೇ ಪದೇ ಹಚ್ಚುತ್ತಿದ್ದರೆ ಬೇಗ ಗುಣಮುಖವಾಗುತ್ತದೆ.

# ಪರಿಶುದ್ದವಾದ ಕೊಬ್ಭರಿ ಎಣ್ಣೆಯಿಂದ ತಯಾರಿಸಿದ ಅಡುಗೆ ಹೆಚ್ಚು ಆರೋಗ್ಯಕರ. ಅಡುಗೆಗೆ ಇತರ ಎಣ್ಣೆಗಳಿಗಿಂತ ಕೊಬ್ಬರಿ ಎಣ್ಣೆಯೇ ಉತ್ತಮ. ಒಂದು ಎಸಳು ಬೆಳ್ಳುಳ್ಳಿ ಮತ್ತು ಒಂದು ಲವಂಗವನ್ನು ಊಟದ ಚಮಚದಷ್ಟು ಅಪ್ಪಟ ಕೊಬ್ಬರಿ ಎಣ್ಣೆಯಲ್ಲಿ ಕರಿಯಬೇಕು. ಈ ಎಣ್ಣೆಯನ್ನು ನಾಲ್ಕೈದು ತೊಟ್ಟು ಕಿವಿಗೆ ಬಿಡಬೇಕು. ಕಿವಿ ನೋವು ಮತ್ತು ಶೀತ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.

# ಕೊಬ್ಬರಿ ಎಣ್ಣೆಗೆ ಕೆಲವು ತೊಟ್ಟು ನಿಂಬೆ ರಸ ಹಿಂಡಿ, ನಂತರ ಎಣ್ಣೆಯನ್ನು ಅಷ್ಟೇ ಪ್ರಮಾಣ ಸುಣ್ಣದ ತಿಳಿಯೊಂದಿಗೆ ಮಿಶ್ರ ಮಾಡಿ. ಈ ಮಿಶ್ರಣವನ್ನು ಅಂಗಾಂಗಗಳಿಗೆ ಹಚ್ಚುವುದರಿಂದ ಒರಟಾದ ಚರ್ಮ ನಯವಾಗುತ್ತದೆ, ಮೃದುವಾಗುತ್ತದೆ ಮತ್ತು ಕಾಂತಿಯುತವಾಗುತ್ತದೆ. ಚರ್ಮ ಸುಕ್ಕುಗಟ್ಟುವುದಿಲ್ಲ. ಈ ಮಿಶ್ರಣವನ್ನು ಕೂದಲಿಗೂ ಹಚ್ಚಬಹುದು. ಇದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ. ಕೂದಲಿನ ಕಾಂತಿ ಹೆಚ್ಚುತ್ತದೆ ಹಾಗೂ ಕೂದಲು ಉದ್ದವಾಗಿ ಬೆಳೆಯುತ್ತದೆ.

# ಗರ್ಭಿಣಿಗೆ ಏಳು ತಿಂಗಳು ಕಳೆದ ಬಳಿಕ ಸಾಮಾನ್ಯವಾಗಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಬಿಸಿ ಮಾಡಿ ಚೆನ್ನಾಗಿ ಬೆನ್ನಿಗೆ ತಿಕ್ಕಿ ಬಿಸಿನೀರು ಹಾಕಿದರೆ ಈ ನೋವು ಕಡಿಮೆಯಾಗುತ್ತದೆ.  ಹಸುವಿನ ಬೆಣ್ಣೆಯನ್ನು ಕೊಬ್ಭರಿ ಎಣ್ಣೆಯೊಂದಿಗೆ ಚೆನ್ನಾಗಿ ಮಸೆದು ಮಗುವಿನ ದೇಹಕ್ಕೆ ಹಚ್ಚಿ ಮಾಲೀಸು ಮಾಡಬೇಕು. ನಂತರ ಮಗುವಿಗೆ ಎಳೆ ಬಿಸಲಿನ ಸ್ನಾನ ಮಾಡಿಸಬೇಕು. ಅಂತಹ ಮಗು ಶಕ್ತಿಯುತವಾಗಿ ಅರೋಗ್ಯವಾಗಿ ಬೆಳೆಯುತ್ತದೆ.

# ತೆಂಗಿನ ಚಿಪ್ಪುಗಳನ್ನು ಸುಟ್ಟು ಪುಡಿ ಮಾಡಿ. ಈ ಚೂರ್ಣಕ್ಕೆ ಉಪ್ಪು ಮತ್ತು ಕರಿ ಮೆಣಸಿನ ಪುಡಿ ಸೇರಿಸಿ. ಹೀಗೆ ತಯಾರಿಸಿದ ಮಿಶ್ರಣ ಉತ್ತಮ ದಂತಧಾವನ ಚೂರ್ಣವಾಗುತ್ತದೆ. ತೆಂಗಿನ ಚಿಪ್ಪನ್ನು ಸುಟ್ಟು ಭಸ್ಮ ಮಾಡಿ ಒಂದು ಟೀ ಚಮಚ ಭಸ್ಮವನ್ನು ಮಜ್ಜಿಗೆಯಲ್ಲಿ ಬೆರೆಸಿ, ಊಟದ ನಂತರ ಸೇವಿಸಿ ಇದರಿಂದ ಅತಿಸಾರ, ಆಮಶಂಕೆ, ಜಠರದಲ್ಲಿ ಗಾಳಿ ತುಂಬಿಕೊಳ್ಳುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ.

# ತೆಂಗಿನ ಜುಟ್ಟಿನಿಂದ ತೆಗೆದ ತೆಂಗಿನನಾರನ್ನು ಸುಟ್ಟು ಬೂದಿ ಮಾಡಿ ಒಂದು ಟೀ ಚಮಚ ಬೂದಿಯನ್ನು ಎಳನೀರಿನಲ್ಲಿ ಕದಡಿ, ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಿ. ಚಿಕ್ಕ ವಯಸ್ಸಿನ ಹುಡುಗಿಯರಲ್ಲಿ ಮುಟ್ಟಿನ ಸಮಯದಲ್ಲಿ ಅಧಿಕ ಸ್ರಾವವಾಗುತ್ತಿದ್ದರೆ, ಈ ಚಿಕಿತ್ಸೆಯಿಮದ ಗುಣವಾಗುತ್ತದೆ. ಇದು ಹೊಟ್ಟೆ ಹುಣ್ಣಿಗೂ ಮತ್ತು ಮೂಲವ್ಯಾಧಿಗೂ ಉತ್ತಮ ಔಷಧ.  ಒಂದು ಬಟ್ಟಲು ತೆಂಗಿನ ನಾರಿನ ಕಷಾಯಕ್ಕೆ ಒಂದು ಟೀ ಚಮಚದಷ್ಟು ಜೇನು ತುಪ್ಪ ಸೇರಿಸಿ ಕುಡಿಸಿದರೆ ದುಂಡು ಹುಳುಗಳು ಮತ್ತು ಚಪ್ಪಟೆ ಹುಳುಗಳು ನಾಶವಾಗುತ್ತವೆ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *