ವರ್ಷಕ್ಕೊಮ್ಮೆಯಾದರೂ ತಪ್ಪದೆ ಕುಂಬಳಕಾಯಿ ಬೀಜ ತಿನ್ನಿ

ಕುಂಬಳಕಾಯಿ ಮತ್ತು ಅದರ ಬೀಜಗಳು ತುಂಬಾ ಸ್ವಾದಿಷ್ಟ ಮತ್ತು ಆರೋಗ್ಯಕರ. ಕುಂಬಳಕಾಯಿ ಬೀಜಗಳು ಎರಡು ರೀತಿಯ ಕಾಯಿಗಳಿಂದ ಲಭಿಸುತ್ತವೆ. ಬೂದುಕುಂಬಳಕಾಯಿ ಮತ್ತು ಸಿಹಿ ಕುಂಬಳಕಾಯಿ. ಈ ಎರಡೂ ಕಾಯಿಗಳು ಆರೋಗ್ಯ ದೃಷ್ಟಿಯಿಂದ ಮಹತ್ವದ್ದು, ಇದರ ತಿರುಳು, ಸಿಪ್ಪೆ, ಮತ್ತು ಬೀಜಗಳು ಬಹು ಉಪಯೋಗಿ. ಮಾನವನ ದೇಹಕ್ಕೆ ಅಗತ್ಯವಾಗಿರುವ ಖನಿಜಗಳು, ಲವಣಗಳು, ಜೀವಸತ್ವಗಳು ಮತ್ತು ಪೋಷಕಾಂಶಗಳ ಭಂಡಾರವೇ ಇದರಲ್ಲಿದೆ. ವರ್ಷಕ್ಕೊಮ್ಮೆಯಾದರೂ ತಪ್ಪದೆ ಕುಂಬಳಕಾಯಿ ತಿನ್ನುವುದರಿದ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು ಎಂಬುದು ಸಾಮೀಟಾಗಿರುವ ಸತ್ಯ.

ಕುಂಬಳಕಾಯಿ ಮತ್ತು ಅದರ ಬೀಜಗಳಲ್ಲಿ ತೇವಾಂಶ, ಸಸಾರಜನಕ, ಮೇದಸ್ಸು, ಖನಿಜಾಂಶ, ಕಾರ್ಬೋಹೈಡ್ರೇಟ್ಸ್, ಸುಣ್ಣ, ಮೆಗ್ನಿಷಿಯಂ, ಫಾಸ್ಪರಸ್, ಕಬ್ಬಿಣ, ತಾಮ್ರ, ಕ್ಲೋರಿನ್, ಸೋಡಿಯಂ, ಆಕ್ಸಾಲಿಕ್ ಆಮ್ಲ, ನಿಕೋಟೆನಿಕ್ ಆಮ್ಲ, ಪೊಟ್ಯಾಷಿಯಂ, ಥಿಯಾಮಿನ್, ನಿಯಾಸಿನ್, ಗಂಧಕ, ರಿಬೋಫ್ಲಾವಿನ್, ಬಿ1, ಬಿ2 ಮತ್ತು ಸಿ ಜೀವಸತ್ವಗಳು ಸಮೃದ್ಧವಾಗಿವೆ. ಕುಂಬಳಕಾಯಿ ಮತ್ತು ಅದರ ಬೀಜಗಳಲ್ಲಿ ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಇದು ಮಲಬದ್ದತೆಯನ್ನು ನಿವಾರಿಸುತ್ತದೆ, ಮೂತ್ರಪಿಂಡಗಳನ್ನು ಆರೋಗ್ಯವಾಗಿಡುತ್ತದೆ. ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ದೇಹದ ಆರೋಗ್ಯ ಸುಧಾರಣೆ ಮತ್ತು ಕಾರ್ಯನಿರ್ವಹಣೆಗೆ ಇದು ಸಹಕಾರಿ.

ಕುಂಬಳಕಾಯಿ ಬೀಜದ ಕೋಶದ ಒಳಗೆ ಇರುತ್ತದೆ. ಇದು ರುಚಿಕರ. ದೇಹದ ಚಯಾಪಚಯ ಕ್ರಿಯೆಗೆ ನೆರವಾಗುತ್ತದೆ, ದೇಹದ ಆರೋಗ್ಯವನ್ನು ವರ್ಧಿಸುತ್ತದೆ. ಶರೀರಕ್ಕೆ ಚೈತನ್ಯ ನೀಡುತ್ತದೆ. ದೇಹದ ಆಲಸ್ಯ ದೂರ ಮಾಡುತ್ತದೆ, ಉತ್ತಮ ನಿದ್ರೆಗೆ ಇದು ಸಹಕಾರಿ, ಮೂಳೆಗಳನ್ನು ರಕ್ಷಿಸುವ ಇದು ಕ್ಯಾನ್ಸರ್ ರೋಗಗಳನ್ನೂ ತಡೆಗಟ್ಟುತ್ತದೆ. ಮೂತ್ರಪಿಂಡ ಕಲ್ಲುಗಳನ್ನು ನಿವಾರಿಸುತ್ತದೆ. ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪರಾವಲಂಬಿ ಜೀವಿಗಳನ್ನು ನಿರ್ಮೂಲನೆ ಮಾಡುತ್ತದೆ. ದೇಹದಲ್ಲಿನ ವಿಷ ವಸ್ತುಗಳನ್ನು ಹೊರದೂಡುತ್ತದೆ. ಕೃಶಕಾಯದವರಿಗೆ ಇದು ಉತ್ತಮ ಆಹಾರ. ತೂಕ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಇದು ಪೋಷಕಾಂಶ ಬೀಜ.

ಕಿಡ್ನಿ ಸ್ಟೋನ್ ನಿವಾರಣೆ :

ಕುಂಬಳಕಾಯಿ ಬೀಜಗಳು ದೇಹದಲ್ಲಿನ ವಿಷಾಂಶಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಇದು ಲೀವರ್ ಮತ್ತು ಮೂತ್ರಪಿಂಡಗಳ ಕಾರ್ಯಗಳನ್ನು ಸಮರ್ಪಕಗೊಳಿಸುತ್ತದೆ. ದೇಹದಲ್ಲಿರುವ ಯೂರಿಕ್ ಆಮ್ಲ ಮತ್ತಿತರ ಇತರ ವಿಷ ವಸ್ತುಗಳನ್ನು ಇದು ಹೊರ ಹಾಕಲು ನೆರವಾಗುತ್ತದೆ. ಇದರಿಂದಾಗಿ ಅಪಾಯಕಾರಿ ಕಿಡ್ನಿ ಸ್ಟೋನ್‍ಗಳು ಅಥವಾ ಮೂತ್ರಪಿಂಡ ಕಲ್ಲುಗಳು ರೂಪುಗೊಳ್ಳುವದನ್ನು ತಡೆಗಟ್ಟುತ್ತದೆ. ಇದು ಸಂಧಿವಾತ ನಿವಾರಣೆಯಲ್ಲೂ ಪ್ರಯೋಜನಕಾರಿ.

ಚಯಾಪಚಯ ಕ್ರಿಯೆಗೆ ಉತ್ತೇಜನ :
ನಮ್ಮ ದೇಹವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಆರೋಗ್ಯ ವೃದ್ಧಿಯಾಗುತ್ತದೆ. ಅಂದರೆ ನಮ್ಮ ಶರೀರದ ಮೆಟಬಾಲಿಸಂ ಅರ್ಥಾತ್ ಚಯಾಪಚಯ ಕ್ರಿಯೆ ಸುಗಮವಾಗಿ ನಡೆಯಬೇಕು. ಇದಕ್ಕೆ ಅಗತ್ಯವಾದ ಜೀವಸತ್ವಗಳು, ಪೋಷಕಾಂಶಗಳು ಮತ್ತು ಖನಿಜಗಳು ಅಗತ್ಯವಾಗಿರುತ್ತದೆ. ಚಯಾಪಚಯ ಕ್ರಿಯೆ ಪ್ರವರ್ತನೆಗೊಳ್ಳಲು ಅಮೈನೋ ಆಮ್ಲಗಳು ಮತ್ತು ಕಿಣ್ವಗಳು ಮುಖ್ಯ. ಇಂಥ ಪ್ರೊಟೀನ್‍ಗಳು ಕುಂಬಳಕಾಯಿ ಬೀಜಗಳಲ್ಲಿ ಇರುವುದರಿಂಚ ದೇಹದ ಕಾರ್ಯ ಸಮರ್ಪಕವಾಗಿ ನಡೆಯಲು ನೆರವಾಗುತ್ತದೆ. ಪ್ರತಿದಿನ ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ಪ್ರಯೋಜನ ಉಂಟು.

ಖಿನ್ನತೆ ಮತ್ತು ನಿದ್ರಾಭಂಗ ಉಪಶಮನ :
ಕೆಲಸದ ಒತ್ತಡದಿಂದ ನೀವು ನಿತ್ರಾಣಗೊಂಡಿದ್ದರೆ, ದಣಿದ್ದಿದ್ದರೆ ಕುಂಬಳಕಾಯಿ ಬೀಜಗಳನ್ನು ಸೇವಿಸುವುದು ಒಳ್ಳೆಯದು. ಇದರಲ್ಲಿ ಮ್ಯಾಗ್ನೆಸಿಯಂ ಮತ್ತು ಟ್ರೈಪ್ಟೊಫಾನ್ ಸಮೃದ್ಧವಾಗಿದ್ದು, ಖಿನ್ನತೆಯನ್ನು ನಿವಾರಿಸುತ್ತದೆ ಮತ್ತು ನಿದ್ರಾಭಂಗವನ್ನು ಉಪಶಮನಗೊಳಿಸುತ್ತದೆ.

ಕುಂಬಳಕಾಯಿ ಮತ್ತು ಬೀಜದಲ್ಲಿರುವ ಔಷಧೀಯ ಗುಣಗಳು :
• ಕುಂಬಳಕಾಯಿ/ಬೀಜ ಸೇವನೆಯಿಂದ ಶರೀರದ ಅತಿ ಉಷ್ಣತೆಯು ನಿವಾರಣೆಯಾಗುತ್ತದೆ.
• ಅಂಗೈ-ಅಂಗಾಲುಗಳ ಉರಿ, ಕಣ್ಣುರಿ ಹಾಗೂ ಮೂತ್ರ ಉರಿ ನಿವಾರಣೆಯಾಗುತ್ತದೆ.
• ಕ್ಷಯ ರೋಗಿಗಳು ಇದನ್ನು ಕ್ರಮವಾಗಿ ಆಹಾರದಲ್ಲಿ ಸೇವಿಸುತ್ತಾ ಬಂದರೆ ನಿಶ್ಯಕ್ತಿ ದೂರವಾಗಿ, ದೇಹವು ಪುಷ್ಟಿಯಾಗುತ್ತದೆ.
• ಬೂದುಕುಂಬಳಕಾಯಿ ರಸವನ್ನು ಬೆಟ್ಟದ ನಲ್ಲಿಕಾಯಿ ರಸದೊಂದಿಗೆ ಪ್ರತಿದಿನ ಸೇವಿಸಿದರೆ ಋತುಚಕ್ರದ ಸಂದರ್ಭದಲ್ಲಾಗುವ ರಕ್ತಸ್ರಾವ ನಿವಾರಣೆಯಾಗುತ್ತದೆ.
• ಬೂದುಕುಂಬಳದ ಒಂದು ಲೋಟ ರಸವನ್ನು ಒಂದು ಚಮಚ ಜೇನಿನೊಂದಿಗೆ ಪ್ರತಿದಿನ ಸೇವಿಸಿದರೆ ಒಳ್ಳೆಯ ಮೂತ್ರೋತ್ತೇಜಕವಾಗಿ ಕಾರ್ಯ ನಿರ್ವಹಿಸುತ್ತದೆ.
• ಬೂದುಕಂಬಳದ ಸಿಪ್ಪೆಯಿಂದ ತೈಲ ತಯಾರಿಸಿ ಕೂದಲಿಗೆ ಹಚ್ಚುತ್ತ ಬಂದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
• ಬಲಿತ ಸಿಹಿಗುಂಬಳದ ತಿರುಳು ಮತ್ತು ಬೀಜವನ್ನು ಆಹಾರದಲ್ಲಿ ಬಳಸುವುದರಿಂದ ಮೂಲವ್ಯಾಧಿ ರೋಗಿಗಳ ಸಮಸ್ಯೆ ನಿವಾರಣೆಯಾಗುತ್ತದೆ.
• ಬಲಿತ ಸಿಹಿಗುಂಬಳ ಕಾಯಿ ತಿರುಳನ್ನು ತೆಗೆದು ರಸಕ್ಕೆ ಜೇನುತುಪ್ಪ ಮತ್ತು ನಿಂಬೆರಸ ಬೆರಸಿ ಉಪಯೋಗಿಸಿದರೆ ರಕ್ತ ವೃದ್ದಿಯಾಗುತ್ತದೆ.
• ಕುಂಬಳಕಾಯಿ ಬೀಜ ಮತ್ತು ಬಾದಾಮಿ ಬೀಜವನ್ನು ಅರೆದು ಹಾಲು ಮತ್ತು ಜೇನುತುಪ್ಪ ಬೆರೆಸಿ ಉಪಯೋಗಿಸಿದರೆ ಶರೀರದ ತೂಕ ಮತ್ತು ಜ್ಞಾಪಕಶಕ್ತಿ ಹೆಚ್ಚಾಗುತ್ತದೆ.
• ಕುಂಬಳಕಾಯಿ ಬೀಜದಿಂದ ಹಾಲು ತೆಗೆದು ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತು ಹುಳುಗಳು ನಾಶವಾಗುತ್ತದೆ.
ಕುಂಬಳಕಾಯಿ/ಬೀಜದಿಂದ ಸಾದಿಷ್ಟ ಮತ್ತು ಆರೋಗ್ಯಕರ ಖಾದ್ಯವನ್ನು ತಯಾರಿಸಬಹುದು. ಹುಳಿ, ಹಲ್ವ, ಮಜ್ಜಿಗೆ ಹುಳಿ, ಸಂಡಿಗೆ, ಪಲ್ಯಕ್ಕೆ ಕುಂಬಳಕಾಯಿ ಬಳಕೆಯಾದರೆ ಬೀಜವನ್ನು ಹಲ್ವ, ಪಾಯಸ, ಕೀರು, ಐಸ್‍ಕ್ರೀಮ್, ಚಾಕೋಲೆಟ್, ಬರ್ಫಿ ಇತ್ಯಾದಿ ರುಚಿಕರ ತಿನಿಸುಗಳ ರುಚಿಯನ್ನು ಹೆಚ್ಚಿಸಲು ಉಪಯೋಗಿಸಬಹುದು.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *