ಕೆಲಸದಲ್ಲಿನ ಸೋಮಾರಿತನ ಕರಿಯರ್ ಮಾರಕವಾಗಬಹುದು ಹುಷಾರ್..!

ಮನುಷ್ಯನನ್ನು ಕಾಡುವ ಅತ್ಯಂತ ಮಾರಕವಾದ ರೋಗವೊಂದಿದ್ದರೆ ಅದು ‘ಆಲಸ್ಯ’. ಜಗತ್ತಿನ ಕಷ್ಟಗಳೆಲ್ಲ ತಲೆಯ ಮೇಲೆ ಹೊತ್ತಿಕೊಂಡಂತಿರುತ್ತದೆ ಆ ವ್ಯಕ್ತಿತ್ವ. ಆಫೀಸ್ ಮೆಟ್ಟಿಲೇರುವ ಮುಖದಲ್ಲಿ ಆಸಕ್ತಿಯೇ ಇರುವುದಿಲ್ಲ. ಅಂದಿನ ಕೆಲಸವನ್ನು ಲಘುಬಗೆಯಿಂದ ಶುರು ಮಾಡುವುದೂ ಇಲ್ಲ. ಒಂದು ಲೋಟ ಕಾಫಿ ಉತ್ಸಾಹ ಮೂಡುವಂತಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ ಹಾಗಾಗುವುದೇ ಇಲ್ಲ. ಬಿಸಿಬಿಸಿ ಕಾಫಿ ಹೀರಿದ ನಂತರ ಯಾರಿಗೋ ಫೋನ್ ಮಾಡಬೇಕು ಅಂದೆನಿಸುತ್ತದೆ. ಇನ್ಯಾರೋ ಬಳಿ ಹರಟೆ ಹೊಡೆಯುವ ಮನಸ್ಸಾಗುತ್ತದೆ. ಎಲ್ಲ ಮುಗಿದು ಇನ್ನೇನು ಕೆಲಸ ಮಾಡುವ ಹೊತ್ತಿಗೆ ಲಂಚ್ ಬ್ರೇಕ್ ಆಮೇಲೆ ಒಂದು ರೌಂಡ ವಾಕ್ ಇಷ್ಟೆಲ್ಲ ಆದಮೇಲೆ ಕಚೇರಿ ಕೆಲಸ ಮಾಡಲಿಕ್ಕೆ ಉಳಿದ ಸಮಯವೆಷ್ಟು? ಮೂರ್ನಾಲ್ಕು ತಾಸು ಕೆಲಸ ಮಾಡಿದ್ರೆ ಹೆಚ್ಚು. ಅದ್ಯಾವುದೇ ಕಚೇರಿಯಾದ್ರೂ ಇಂಥದ್ದೊಂದು ನೌಕರರು ಗುಂಪಿರುತ್ತದೆ. ಕೆಲಸದ ವೇಳೆಯಲ್ಲಿ ವೈಯಕ್ತಿಕ ಕೆಲಸ ಅಥವಾ ಸೋಮಾರಿಯಾಗಿ ಕಾಲ ಕಳೆದು ಬಿಡುತ್ತಾರೆ. ಹಾಗಂತ ಅವರೇನು ದಡ್ಡರಲ್ಲ, ಆದ್ರೆ ಕೆಲಸದಲ್ಲಿ ಶಿಸ್ತು ತೋರಿಸುವುದಿಲ್ಲ. ಇಷ್ಟೆಲ್ಲ ಆದ್ರೂ ಬಾಸ್ ಗಮನಕ್ಕೆ ಬರುವುದಿಲ್ಲ ಅಂತಲ್ಲ. ಆದರೆ ಸೋಮಾರಿ ಉದ್ಯೋಗಿಗಳಿಂದ ಕೆಲಸ ತೆಗೆಸುವಲ್ಲಿ ಬಾಸ್ ಸೋತು ಹೋಗುತ್ತಾನೆ. ಕಚೇರಿ ಶಿಸ್ತು, ಸಮಯದ ಪಾಲನೆ ಬಗ್ಗೆ ಪದೆಪದೆ ನೌಕರರಿಗೆ ಹೇಳಿದರೂ ನಾಲ್ಕಣೆಯಷ್ಟೂ ಜಾರಿಯಾಗುವುದಿಲ್ಲ. ಅಲ್ಲಿಗೆ ಬಾಸï ಏನಾದ್ರೂ ಮಾಡಿಕೊಂಡು ಹಾಳಾಗಿ ಹೋಗ್ಲಿ ಅಂಥ ಸುಮ್ಮನಿದ್ದು ಬಿಡುತ್ತಾನೆ.

ಉತ್ಪಾದನೆಗೆ ನಷ್ಟ :
ಪದೆಪದೆ ಕಾಫಿಗೆ ಎದ್ದು ಹೋಗುವುದು, ಸಹದ್ಯೋಗಿ ಬಳಿ ಹರಟೆ ಹೊಡೆಯುವುದು ಅದ್ಯಾವುದೂ ಇಲ್ಲ ಅಂದರೆ ಇಂಟರ್‍ನೆಟ್‍ನಲ್ಲಿ ಮುಳುಗಿ ಸೋಮಾರಿತನ ಪ್ರದರ್ಶನ ಮಾಡುವುದಿದೆಯಲ್ಲ, ಅದು ನೌಕರನ ವ್ಯಕ್ತಿತ್ವಕ್ಕೆ, ಕ್ರಿಯಾಶೀಲತೆಗೆ ಹೊಡೆತ ಕೊಡುತ್ತದೆ. ಅದು ಉತ್ಪಾದನೆ ಮೇಲೆ ಮಾರಕ ಪರಿಣಾಮ ಬೀರಬಹುದು. ಉದ್ಯೋಗಿಯಿಂದ ನಷ್ಟ ಅಂತ ಗೊತ್ತಾದ ಮೇಲೆ ಯಾವ ಮಾಲೀಕ ತಾನೇ ಅಂಥವರನ್ನು ತನ್ನ ಸಂಸ್ಥೆಯಲ್ಲಿ ದುಡಿಸಿಕೊಳ್ಳಲು ಇಷ್ಟಪಡುತ್ತಾನೆ? ಒಂದಲ್ಲ ಒಂದಿನ ಹೊರ ಹಾಕುವುದು ವಾಸ್ತವ.

ನಿಮ್ಮೊಳಗಿನ ಆಲಸ್ಯ ಓಡಿಸಿ :
ಹೇಗ್ಬೆಕಾದ್ರೂ ಇರಬಹುದು ಅನ್ನುವುದು ಆಫೀಸ್ ವಾತಾವರಣಕ್ಕೆ ಸೂಕ್ತವಲ್ಲ. ಅದಕ್ಕೆ ಅದರದೇ ಆದ ಶಿಸ್ತು, ನಿಯಮಗಳಿರುತ್ತವೆ. ಅದೇ ಕಾರಣಕ್ಕೆ ನೀವು ಆಫೀಸ್ ಮೆಟ್ಟಲ ಮೇಲೆ ಕಾಲಿಡುವುದರಿಂದ ಹಿಡಿದು ಮನೆಗೆ ಹೋಗುವ ತನಕವೂ ನಿಮ್ಮ ಕೆಲಸವಷ್ಟೆ ಅಲ್ಲ, ನಡವಳಿಕೆ ಮುಖ್ಯ. ಒಂದೇ ಕಡೆ ಹೆಚ್ಚು ಹೊತ್ತು ಕೆಲಸ ಮಾಡುತ್ತಿದ್ದರೆ ಆಲಸ್ಯ ಸಹಜವಾಗಿ ಬರಬಹುದು. ಅದನ್ನು ದೂರವಿರಿಸಲು ಒಂದೆರಡು ನಿಮಿಷ ಆ ಕೆಲಸದಿಂದ ಹೊರಬನ್ನಿ. ಲಘು ವ್ಯಾಯಾಮ ಮಾಡಿ. ಆಗಾಗ ಶುದ್ಧ ನೀರು ಕುಡಿಯಿರಿ. ನಿದ್ದೆ ಬರುತ್ತಿದ್ದರೆ ಮುಖವನ್ನೊಮ್ಮೆ ತೊಳೆದುಕೊಳ್ಳಿ. ಆದರೆ ಈ ಆಲಸ್ಯ ಅನ್ನುವುದು ಕೆಲಸಕ್ಕಿಂತ ಹೆಚ್ಚಾದರೆ ಸಂಸ್ಥೆಗೂ ನಷ್ಟ. ನಿಮ್ಮ ಕೆಲಸಕ್ಕೂ ಕುತ್ತು.

ನೀವು ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಅಥವಾ ಕಛೇರಿಯಲ್ಲಿ ನೀವು ಹೇಗಿರಬೇಕು..?
* ನಿಮ್ಮ ಕೆಲಸದ ವೇಳೆ ಗಮನದಲ್ಲಿರಲಿ. ವ್ಯರ್ಥವಾಗಿ ಕಳೆಯುವ ಸಮಯದ ಮೇಲೆ ನಿಗಾ ಇರಲಿ. ಹಾಗಂತ ಉಸಿರು ಕಟ್ಟಿಸುವ ವಾತಾವರಣ ಸೃಷ್ಟಿಸಬೇಡಿ.
* ಸೋಮಾರಿತನದ ಮೂಲ ಕಂಡು ಹಿಡಿಯಿರಿ. ಕೆಲಸಕ್ಕೆ ಪೂರಕ ವಾತಾವರಣವಿದೆಯೋ ಇಲ್ಲವೋ ಅನ್ನುವುದು ಕೂಡ ಮುಖ್ಯ.
ಕೆಲಸದಲ್ಲಿ ಮೈಗಳ್ಳತನ ತೋರುತ್ತಿದ್ದರೆ ಇನ್ನಷ್ಟು ಜವಾಬ್ದಾರಿ ವಹಿಸಿ. ಸೊಮಾರಿತನ ನಿಮ್ಮನ್ನಾವರಿಸಿದ್ದರೆ
ಅದಕ್ಕೆ ಕಾರಣಗಳನ್ನು ತಿಳಿದುಕೊಂಡು ಪರಿಹಾರಕ್ಕೆ ಪ್ರಯತ್ನಿಸಿ.
*ಇನ್ನಷ್ಟು ತರಬೇತಿ ಅಗತ್ಯ ಇದೆಯಾ ಎಂಬುದನ್ನು ಕೇಳಿನೋಡಿ. ಸಂಸ್ಥೆ ನಿಮ್ಮಿಂದ ಏನು ಬಯಸುತ್ತದೆ ಎಂಬುದನ್ನು ಖಚಿತಪಡಿಸಿ.
* ಹೊಸ ಕೆಲಸಗಳನ್ನು ಕೊಟ್ಟು ಮತ್ತಷ್ಟು ಉತ್ತೇಜಿಸಿ.

ಹಸನ್ಮುಖಿಯಾಗಿರಿ..
ನಗುನಗುತ್ತಾ ಸದಾ ಖುಷಿಯಿಂದ ಕೆಲಸ ಮಾಡುವವವರು ಹೆಚ್ಚು ಉತ್ಪಾದನಾ ಹಾಗೂ ಗುಣಮಟ್ಟದ ಕೆಲಸ ಮಾಡುತ್ತಾರೆ. ಹಾಗಂತ ಸಮೀಕ್ಷೆಯೊಂದು ತಿಳಿಸಿದೆ. ಯಾವುದೋ ಜೋಕ್, ಇನ್ಯಾರದ್ದೋ ಟೀಕೆಯ ನಗು ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಉತ್ಪಾದನೆ ಶಕ್ತಿ ಹೆಚ್ಚಿಸುವುದಿಲ್ಲ. ಅದರ ಬದಲು ಇಡೀ ಕೆಲಸದ ವಾತಾವರಣವನ್ನು ಖುಷಿಖುಷಿಯಿಂದ ನೋಡುತ್ತೀರಲ್ಲ, ಆಗ ನಿಮ್ಮ ಮನಸ್ಸು ಕೂಡ ಶಾಂತವಾಗಿರುತ್ತದೆ. ಕೆಲಸಕ್ಕೆ ನಿಮ್ಮನ್ನು ಉತ್ತೇಜಿಸುತ್ತದೆ. ನಡೆನುಡಿಯಲ್ಲಿ ಸರಳವಾಗಿರಬೇಕು. ಸಹದ್ಯೋಗಿಗಳ ಮೇಲಿನ ಅಸೂಯೆ ಬಿಡಬೇಕು.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *