ಆಧುನಿಕ ಬದುಕಿಗೂ ಒಗ್ಗಿದ ಕುರ್ತಾ

ಈ ಫ್ಯಾಷನ್‍ಜಗತ್ತಿನಲ್ಲಿ ಎಲ್ಲವೂ ಬದಲಾಗುತ್ತಲೇ ಇರುತ್ತವೆ. ಮನಸ್ಸುಗಳ ಭಾವನೆಗಳಂತೆ, ಬಟ್ಟೆಗಳ ಬಣ್ಣಗಳಂತೆ ಪ್ರತಿದಿನವು ಪ್ರತಿಯೊಬ್ಬರೂ ಬದಲಾವಣೆ ಬಯಸುತ್ತಾರೆ. ಬದಲಾವಣೆ ಎಂಬುದು ಪ್ರಕೃತಿಯ ನಿಯಮ. ಫ್ಯಾಷನ್ ಪ್ರಿಯ ಯುವತಿಯರಿಗಿದು ಬಹು ಆಯ್ಕೆಯಕಾಲ. ಇಷ್ಟವಾದುದನ್ನು ಆಯ್ದುಕೊಳ್ಳಲು ಬೇಕಾದಷ್ಟು ಅವಕಾಶಗಳು. ಸೌಂದರ್ಯಪ್ರಜ್ಞೆ ಇರುವ ಯುವತಿ ಯಾವತ್ತೂ ತನ್ನ ಅಂದ ಹೆಚ್ಚಿಸಬಲ್ಲ ಉಡುಗೆಯತ್ತಲೇ ಗಮನ ಹರಿಸುತ್ತಾಳೆ. ಅದರಲ್ಲಿಯೂ ಹೊಸತನಕ್ಕಾಗಿ ತಡಕಾಡುತ್ತಾಳೆ. ಹೊಸತನ್ನು ತನ್ನದಾಗಿಸಿಕೊಳ್ಳುವ ಕುತೂಹಲದಲ್ಲಿ ಅದನ್ನು ಖರೀದಿಸುವುದನ್ನು ರೂಢಿಸಿಕೊಂಡಿದ್ದಾಳೆ. ಅದ್ದರಿಂದಲೇ ಫ್ಯಾಷನ್ ಜಗತ್ತು ದಿನನಿತ್ಯ ಬದಲಾವಣೆಗೆ ತೆರೆದುಕೊಳ್ಳುತ್ತಿದೆ. ಸಾಂಪ್ರದಾಯಿಕ ಉಡುಪುಗಳಿಗೆ ಹೈಟೆಕ್ ಸ್ಪರ್ಶ ನೀಡಿದರೆ ಅದೇ ಆಧುನಿಕ ಉಡುಗೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕುರ್ತಾವನ್ನೆ ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡಿ ಧರಿಸುತ್ತಿದ್ದಾರೆ. ಆಧುನಿಕ ಯುಗದಲ್ಲಿ ಕೇವಲ ಹದಿಹರೆಯದ ಹುಡುಗಿಯರಷ್ಟೇ ಯಾಕೆ, ಆಫೀಸ್‍ಗೆ ಹೋಗುವ ಮಹಿಳೆಯರೂ ಜೀನ್ಸ್‍ನೊಂದಿಗೆ ಕುರ್ತಾ ಧರಿಸಿ ಬೀಗುತ್ತಿದ್ದಾರೆ. ಸೀರೆಯನ್ನೇ ನೆಚ್ಚಿಕೊಂಡಿದ್ದ ಮಹಿಳೆಯರು ಸಾಂಪ್ರದಾಯಿಕತೆ ಬಿಟ್ಟು ಆಫೀಸ್‍ಗೆ ಹೋಗಬೇಕಾದ ಕಷ್ಟದಿಂದ ಪಾರಾಗಿದ್ದಾರೆ. ಈಗ ಏನಿದ್ದರೂ ಜೀನ್ಸ್‍ಗೊಂದು ಕುರ್ತಾ, ಅದಕ್ಕೊಪ್ಪುವ ಬಳೆ, ಸ್ಯಾಂಡಲ್ಸ, ಕಿವಿಯ ಆಭರಣ ಧರಿಸಿ ಅಥವಾ ನಿರಾಭರಣ ಸುಂದರಿಯಾಗಿಯೂ ಮಹಿಳೆ ಆಧುನಿಕತೆಗೆ ತೆರೆದುಕೊಂಡಿದ್ದಾಳೆ.

ಆಫೀಸ್ ಇರಲಿ, ಹಬ್ಬದ ಸಂದರ್ಭ ಇರಲಿ ಅಥವಾ ಮದುವೆ ಕಾರ್ಯಕ್ರಮಗಳೇ ಇರಲಿ ಎಲ್ಲ ಸಂದರ್ಭಗಳಿಗೂ ಶಾರ್ಟ್ ಕುರ್ತಾ ಲುಕ್ ನೀಡುತ್ತದೆ. ಸಿಂಪಲï ಆಗಿ ಕಾಣಿಸುವ, ಗ್ರ್ಯಾಂಡ್ ಲುಕ್ ನೀಡುವ ಕುರ್ತಾಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಲಭ್ಯ. ಶಾರ್ಟ್ ಕುರ್ತಾಗಳು ನಾರ್ಮಲï ಸೈಜಿಗಿಂತ ಚಿಕ್ಕದಾಗಿರುತ್ತವೆ. ಜೀನ್ಸ್ ಪ್ಯಾಂಟ್‍ಗೆ ಸರಿ ಹೊಂದುತ್ತವೆ. ಸಿಲ್ಕ್ ಕಾಟನ್ ಮತ್ತು ಕ್ರೇಪ್ ಬಟ್ಟೆಗಳಿಂದ ಸಿದ್ಧಪಡಿಸಿದ ಕುರ್ತಾಗಳು ಮಾರುಕಟ್ಟೆಯಲ್ಲಿ ಲಭ್ಯ. ಸಾಂಪ್ರದಾಯಕವಾಗಿ ಹೆಣೆದ ಮತ್ತು ಆಧುನಿಕವಾಗಿ ಬೀಡ್ಸ್‍ಗಳಿಂದ ಎಂಬ್ರಾಯಿಡರಿ ಮಾಡಿ ಸಿದ್ಧಪಡಿಸಿದ ಕುರ್ತಾಗಳನ್ನು ಹಬ್ಬ, ಮದುವೆಯಂತಹ ಸಂಭ್ರಮದ ದಿನಗಳಲ್ಲಿಯೂ ಧರಿಸಬಹುದು. ಅರ್ಧ ತೋಳಿನ, ಫುಲ್ ಸ್ಲೀವ್ ಇರುವ ಕುರ್ತಾಗಳನ್ನು ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡಿ ಧರಿಸಬಹುದು. ಬಣ್ಣ ಬಣ್ಣಗಳಿಂದ ಕೂಡಿದ ಸಿಂಪಲï ಆಗಿ ಕಾಣುವ ಕುರ್ತಾಗಳನ್ನು ಕಾಲೇಜು, ಆಫೀಸ್‍ಗೆ ಧರಿಸಬಹುದು. ಬೀಡ್ಸ್ ಬಣ್ಣ ಬಣ್ಣದ ಸೀಕ್ವೆನ್ಸ್ ಅಥವಾ ದಾರದಿಂದ ತಯಾರಿಸಿದ ಡಿಸೈನ್ ಇರುವ ಕುರ್ತಾಗಳನ್ನು ಹಬ್ಬ, ಮದುವೆ, ಪಾರ್ಟಿ ಸಮಾರಂಭಗಳಲ್ಲಿ ಧರಿಸಬಹುದು.

ಸ್ಟ್ರಾಪ್ ಇಲ್ಲದಿರುವ ಅಥವಾ ಸ್ಲೀವ್ ಇಲ್ಲದ ಟಾಪ್‍ಗಳು ವಿವಿಧ ಡಿಸೈನ್‍ಗಳಲ್ಲಿ ಲಭ್ಯವಿರುತ್ತವೆ. ಸ್ಟ್ರಾಪ್‍ಲೆಸ್ ಟಾಪ್ಸ್ ಧರಿಸುವುದಕ್ಕೆ ಎಲ್ಲರ ಮನ ಬಯಸಿದರೂ ಎಲ್ಲರೂ ಧರಿಸುವ ಧೈರ್ಯ ತಂದುಕೊಂಡಂತಿಲ್ಲ. ಸಿನಿಮಾಗಳಲ್ಲಿ, ಫ್ಯಾಷನ್ ಶೋಗಳಲ್ಲಿ, ಪಾರ್ಟಿಗಳಲ್ಲಿ ಧರಿಸುವುದನ್ನಷ್ಟೇ ಕಾಣಬಹುದು. ಹೆಚ್ಚಿನ ಮಹಿಳೆಯರು ಕುರ್ತಾಗಳನ್ನು ಇಷ್ಟಪಡಲುಪ್ರಮುಖ ಕಾರಣ ಇದು ಸರಳ ಉಡುಗೆ. ಲೆಗ್ಗಿನ್ಸ್, ಜೀನ್ಸ್, ಪಟಿಯಾಲ, ಲಾಂಗ್ ಸ್ಕರ್ಟ್, ಹೀಗೇ ಯಾವುದರ ಮೇಲೂ ಧರಿಸಬಹುದಾದ ಉಡುಗೆಯಿದು. ಸೀರೆ ಉಡಲು ಬೇಕಾಗುವಷ್ಟು ಸಮಯ ಕುರ್ತಾ ಧರಿಸಲು ಬೇಕಾಗಲ್ಲ. ಜೊತೆಗೆ ಚೂಡಿದಾರಕ್ಕಾದರೆ ಹೊಲಿಗೆ ಚಾರ್ಜ್ ಕೂಡ ನೀಡಬೇಕಾಗುತ್ತದೆ. ಆದರೆ ರೆಡಿಮೇಡ್ ಕುರ್ತಾ ಖರೀದಿಸಿದರೆ ಇದ್ಯಾವ ಖರ್ಚು ಇಲ್ಲ. ಸ್ವಲ್ಪ ಫಿಟ್ಟಿಂಗ್ಸ್ ಸರಿಪಡಿಸಿಕೊಂಡರೆ ಸಾಕಾಗುತ್ತದೆ. ಹಾಗಾಗಿ ಕುರ್ತಾನೇ ಉತ್ತಮ ಎನ್ನುವುದು ಹೆಚ್ಚಿನ ಮಹಿಳೆಯರ ಅಭಿಪ್ರಾಯ.

ಕಾಲೇಜು ವಿದ್ಯಾರ್ಥಿನಿಯರಿಗಂತೂ ಕುರ್ತಾ ಬಲು ಪ್ರಿಯ. ಕಾಲೇಜು ಸಮವಸ್ತ್ರನೂ ಕುರ್ತಾನೇ ಆಗಿದ್ದರೆ ಚೆನ್ನಾಗಿರುತ್ತದೆ ಅನ್ನೋದು ಕೆಲವು ಕಾಲೇಜು ಹುಡುಗಿಯರ ಆಲೋಚನೆ. ಸಾಂಪ್ರದಾಯಿಕ ಉಡುಗೆಯಾದರೂ, ಆಧುನಿಕ ಲುಕ್ ಕೊಡುವ ಕುರ್ತಾಗಳು ಹೆಣ್ಣು ಮಕ್ಕಳ ಇಷ್ಟದ ಉಡುಗೆ! ಕುರ್ತಾ ಖರೀದಿಸುವಾಗ ಅದರ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕಾದದ್ದು ಬಹಳ ಅಗತ್ಯ. ವಿವಿಧ ನಮೂನೆಯ ಕುರ್ತಾಗಳು ಕಡಿಮೆ ಬೆಲೆಗೆ ಲಭ್ಯವಿದ್ದರೂ ಬಾಳಿಕೆ ಬರುವ, ಆಕರ್ಷಕ ಕುರ್ತಾಗಳನ್ನು ನಿರೀಕ್ಷೆ ಮಾಡುವಿರಾದರೆ ಹಣ ಉಳಿತಾಯ ಮಾಡುವ ಯೋಚನೆ ಮಾಡಬಾರದು. ಗುಣಮಟ್ಟದ ಬಣ್ಣವನ್ನು ಬಳಸಿರುವ ಬಟ್ಟೆಯನ್ನು ಖರೀದಿಸಿ. ಇದರಿಂದ ಬಟ್ಟೆಯ ಬಣ್ಣ ಕಳೆಗುಂದುವುದಿಲ್ಲ. ದೀರ್ಘ ಕಾಲದವರೆಗೆ ಬಾಳಿಕೆ ಬರುತ್ತದೆ.

ಕಾಲಕ್ಕೆ ತಕ್ಕಂತೆ ಬಟ್ಟೆಗಳ ಆಯ್ಕೆ ಇರಲಿ. ಬೇಸಿಗೆಯಲ್ಲಿ ಖಾದಿ ಬಟ್ಟೆಗಳು ಮತ್ತು ಪ್ಯೂರ್ ಕಾಟನ್ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಿ. ಕಾಟನ್ ಬಟ್ಟೆಗಳ ಆಯ್ಕೆಯ ಸಮಯದಲ್ಲಿ ಪಾರದರ್ಶಕ(ಟ್ರಾನ್ಸ್ಪರೆಂಟ್) ಬಟ್ಟೆಗಳ ಆಯ್ಕೆ ಬೇಡ. ಅದು ನಿಮ್ಮ ಒಳ ಉಡುಪುಗಳನ್ನು ಹೊರಗಿನ ಪ್ರಪಂಚಕ್ಕೆ ಪ್ರದರ್ಶಿಸುತ್ತದೆ. ಬೇಸಿಗೆಗೆ ಸ್ಲೀವ್‍ಲೆಸ್ ಬಟ್ಟೆಗಳ ಆಯ್ಕೆ ಸೂಕ್ತ.

ಹಾಗೆಯೇ ಚಳಿಗಾಲದಲ್ಲಿ ದಪ್ಪನೆಯ ಬಟ್ಟೆಗಳನ್ನು ಆಯ್ದುಕೊಳ್ಳಿ. ಅವು ನಿಮ್ಮನ್ನು ಚಳಿಯಿಂದ ರಕ್ಷಿಸುತ್ತವೆ. ಚಳಿಗಾಲದಲ್ಲಿ ಸ್ಲೀವ್‍ಲೆಸ್ ಬಟ್ಟೆಗಳ ಮೊರೆ ಹೋಗಬೇಡಿ. ಜೊತೆಗೆ ನೀವು ಕುರ್ತಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅದಕ್ಕೆ ಸೂಟ್ ಆಗುವ ಸ್ಕಾರ್ಫ್‍ಗಳನ್ನು ಆಯ್ದುಕೊಳ್ಳಿ. ಅದು ನಿಮ್ಮ ಕುರ್ತಾ ಬಣ್ಣಕ್ಕೆ ಮ್ಯಾಚ್ ಆಗುವಂತಿರಲಿ.  ಜೀನ್ಸ್ ಪ್ಯಾಂಟ್‍ನೊಂದಿಗೆ ಕುರ್ತಾ ಧರಿಸುವಾಗ ಹೆಚ್ಚಿನ ಜಾಗೃತೆ ವಹಿಸಿ. ನಿಮ್ಮ ದೇಹಕ್ಕೆ ಯಾವ ಬಗೆಯ ಕುರ್ತಾಗಳು ಸರಿಹೊಂದುತ್ತವೆ ಎಂದು ತಿಳಿದುಕೊಳ್ಳಿ, ಹಾಗೂ ಬಟ್ಟೆಗಳ ಕ್ವಾಲಿಟಿ ಮತ್ತು ಅದರ ಸ್ಟಿಚ್ ಬಗ್ಗೆ ಎಚ್ಚರವಹಿಸಿ. ಅತಿ ಬಿಗಿಯಾದ ಬಟ್ಟೆಗಳು ನಿಮ್ಮನ್ನು ಕಂಫರ್ಟ್ ಆಗಿ ಇರಿಸುವುದಿಲ್ಲ  ಕುರ್ತಾದಲ್ಲಿಯೇ ಹಲವು ಬಗೆಯ, ನವನವೀನ ಡಿಸೈನ್‍ಗಳಿರುವ ಉಡುಪುಗಳು ಲಭ್ಯ. ಪ್ಯಾಂಟ್ಸ್ ಜೀನ್ಸ್ ಪೈಜಾಮಾ, ಸಲ್ವಾರ್ ಮತ್ತು ಸ್ಕಟ್ರ್ಸ್‍ಗೂ ಸಣ್ಣ ಕುರ್ತಾಗಳನ್ನು ಮ್ಯಾಚ್ ಮಾಡಬಹುದು.

70ರ ದಶಕದ ಚಲನಚಿತ್ರಗಳನ್ನು ಗಮನಿಸಿ, ಅಲ್ಲಿ ಈ ಕುರ್ತಾಗಳದ್ದೇ ದರ್ಬಾರ್. ಆಗಿನ ಹೀರೋಯಿನ್‍ಗಳಿಗೆ ಈ ಕುರ್ತಾಗಳು ಪ್ರತಿಷ್ಠೆಯ ಉಡುಗೆಗಳಾಗಿದ್ದವು. ಆದರೆ ಟ್ರೆಂಡ್ ಕಾಲದ ಚಕ್ರದಲ್ಲಿ ಬದಲಾಗುತ್ತಾ ಸಾಗಿತ್ತು. ಓಲ್ಡ್ ಈಸ್ ಗೋಲ್ಡ್ ಎನ್ನುವ ಹಾಗೆ ಅದು ಇಂದಿನವರ ಹೊಸದೊಂದು ಟ್ರೆಂಡ್ ಆಗಿ ಮತ್ತೆ ಮರುಕಳಿಸಿದೆ. ಹಾಗೆ ನೋಡಿದರೆ ಕುರ್ತಾ ಎನ್ನುವುದು ಪರ್ಶಿಯನ್ ಪದ. ಇದರ ಅರ್ಥ ಕಾಲರ್‍ರಹಿತ ಅಂಗಿ ಎನ್ನುವುದು. ಪುರುಷರು ಪೈಜಾಮದ ಮೇಲೆ, ಮಹಿಳೆಯರು ಚೂಡಿದಾರ್, ಸಲ್ವಾರ್, ಜೀನ್ಸ್ ಮೇಲೆ ಧರಿಸುವ ಈ ಸಡಿಲಾದ ಅಂಗಿ ಆಘ್ಘಾನಿಸ್ತಾನ, ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾದಲ್ಲಿ ಜನಪ್ರಿಯ. ಈಗಂತೂ ಇದು ದಕ್ಷಿಣ ಏಷ್ಯಾದ ಫ್ಯಾಷನ್ ಉಡುಪು ಎಂದೇ ಹೆಸರುವಾಸಿ. 1960-70ರ ದಶಕದಲ್ಲಿ ಕುರ್ತಾ ಬಹಳ ಜನಪ್ರಿಯ ಉಡುಗೆಯಾಗಿತ್ತು. ನಂತರ ಬ್ರಾಂಡೆಡ್ ಉಡುಪುಗಳು ಹೆಚ್ಚಿದಂತೆ ಪೈಪೋಟಿ ಯಲ್ಲಿ ಹಿಂದೆ ಬಿದ್ದಿತು. ಈಗ ಕುರ್ತಾ ಮತ್ತೆ ಜನಮೆಚ್ಚುಗೆ ಗಳಿಸುತ್ತಿದೆ. ಕುರ್ತಾದಲ್ಲಿಯೇ ಹಲವು ಬಗೆಯ, ನವನವೀನ ಡಿಸೈನ್‍ಗಳಿರುವ ಉಡುಪುಗಳು ಲಭ್ಯ. ಪ್ಯಾಂಟ್ಸ್ ,ಜೀನ್ಸ್, ಪೈಜಾಮಾ, ಸಲ್ವಾರ್ ಮತ್ತು ಸ್ಕಟ್ರ್ಸ್‍ಗೂ ಸಣ್ಣ ಕುರ್ತಾಗಳನ್ನು ಮ್ಯಾಚ್ ಮಾಡಬಹುದು.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *