ಮೌನವಾಗಿದ್ದು ಮನಗೆಲ್ಲೋದು ಹೇಗೆ..? ಅತಿಯಾಗಿ ಮಾತೋಡೋ ಅಭ್ಯಾಸ ಇರೋರು ತಪ್ಪದೆ ಓದಿ

ಮಾತಿನಿಂ ನಗೆ ನುಡಿಯು
ಮಾತಿನಿಂ ಹಗೆ ಹೊಲೆಯು
ಮಾತಿನಿಂ ಸರ್ವ ಸಂಪದವು
ಲೋಕಕ್ಕೆ ಮಾತೇ ಮಾಣಿಕ್ಯ ಸರ್ವಜ್ಞ
ಪ್ರಾಣಿಗಳಲ್ಲಿ ಸರ್ವ ಶ್ರೇಷ್ಠನಾದ ಮಾನವನಿಗೆ ಮಾತ್ರ ದೊರೆತಿರುವ ವಿಶೇಷಗಳಲ್ಲಿ ಮಾತೂ ಒಂದು. ಮಾನವ ಬುದ್ಧಿ ಜೀವಿ ತನ್ನೆಲ್ಲಾ ವ್ಯವಹಾರಗಳನ್ನು ನಾಲಿಗೆಯ ಜಾಣ್ಮೆಯಿಂದ ಸಾಧಿಸಿಕೊಳ್ಳುವ ಶಕ್ತಿ ಜೊತೆಗೆ ವೈರತ್ವವನ್ನು, ಸರ್ವ ಸಂಪತ್ತನ್ನು ಪಡೆಯುವನು ಎಂಬುದನ್ನು ಸರ್ವಜ್ಞನ ವಚನ ಸಾರಿ ಹೇಳುತ್ತದೆ.ಆದರೂ ಮಾತಿಗಿಂತ ಕೃತಿ ಲೇಸು. ಮಾತು ಬೆಳ್ಳಿ.. ಮೌನ ಬಂಗಾರ.. ಎಂಬ ಮಾತುಗಳು ಕಾಯಕದ ಮಹತ್ವ ಮತ್ತು ಮೌನದ ಮೇಲ್ಮೆಯನ್ನು ಒತ್ತಿ ಹೇಳುತ್ತವೆ.  ಬರೆಯುವ ಮುನ್ನ ಯೋಚಿಸುವಂತೆ, ಮಾತನಾಡುವ ಮುನ್ನವೂ ತುಂಬಾ ಯೋಚಿಸಬೇಕು. ಯೋಚಿಸಿ ಮಾತನಾಡುವುದಕ್ಕಿಂತ ಮಾತನಾಡಿ ಯೋಚಿಸುವವರೇ ಬಹಳ. ಹೀಗಾಗಿ ಬಳಸಿದ ಪದ ಪ್ರಯೋಗಗಳು ರಾದ್ಧ್ದಾಂತಕ್ಕೆ ಎಡೆ ಮಾಡಿಕೊಡುತ್ತವೆ. ಮಾತಿನಿಂದ ಇಲ್ಲ ಸಲ್ಲದ್ದನ್ನೆಲ್ಲ ಮೈ ಮೇಲೆ ಎಳೆದು ಕೊಳ್ಳುವುದಕ್ಕಿಂತ ಮೌನವಾಗಿರುವುದು ಒಳಿತಲ್ಲವೆ ? ಬಾಯಿ ಇದ್ದವರಿಗೆ ಸೋಲಿಲ್ಲವೆನ್ನುವದು ನಿಜವಾದರೂ ನಾಲಿಗೆಯ ಮೇಲೆ ನಿಯಂತ್ರಣವಿಲ್ಲದವ ಕಷ್ಟಕ್ಕೀಡಾಗುತ್ತಾನೆ ಎನ್ನುವುದು ಪರಮಹಂಸರ ಅಭಿಪ್ರಾಯ.

ಮನೋ ನಿಗ್ರಹವಿದ್ದರೆ ಮೌನ ಸಾಧ್ಯ :

ನಮ್ಮಲ್ಲಿ ಮಾತನ್ನು ಇಷ್ಟ ಪಡುವವರೆ ಬಹಳ. ಮೌನ ಇಷ್ಟಪಡುವವರು ತುಂಬಾ ವಿರಳ. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳೆಲ್ಲ ಮೌನವ್ರತ ಆಚರಿಸಿ ಮನೋ ನಿಗ್ರಹದಿಂದ ಅತ್ಯುತ್ತಮ ಜೀವನಕ್ಕೆ ಕಾಣಿಕೆಯಾಗಿ ಕೊಟ್ಟಿದ್ದಾರೆ. ಮಾತು ಹೇಗೆ ಬೇಕಾದರೂ,ಯಾವಾಗ ಬೇಕಾದರೂ, ಯಾರು ಬೇಕಾದರೂ ಆಡಬಹುದು ಆದರೆ ಮನೋ ನಿಗ್ರಹವಿದ್ದವನಿಗೆ ಮಾತ್ರ ಮೌನ ಸಾಧ್ಯ. ಸಾಧಕರಿಗೆ ಮಾತ್ರ ಒಲಿಯುವಂಥದು ಮೌನ.

ಏಕಾಗ್ರತೆಗೆ ಮದ್ದು ಮೌನ : 

ಮನಸ್ಸಿನ ಏಕಾಗ್ರತೆ ಸಾಧ್ಯವಾಗುತ್ತಿಲ್ಲ ಎಂಬುದು ಹಲವರ ಗೊಣಗಾಟ. ಏಕಾಗ್ರತೆಗೆ ಮದ್ದು ಮೌನ. ಮಾತಿಗೆ ಹೋಲಿಸಿದರೆ ಮೌನ ಹೆಚ್ಚು ಶಕ್ತಿಯುತವಾದುದು, ಹರಿತವಾದುದು ಅದಕ್ಕೆ ಸಮ್ಮತಿ ಮತ್ತು ಅಸಮ್ಮತಿ ಸೂಚಿಸುವ ಶಕ್ತಿಯಿದೆ. ಮೌನವಾಗಿದ್ದಷ್ಟು ಏಕಾಗ್ರತೆಯತ್ತ ಮನಸ್ಸು ಹೊರಳುತ್ತೆ. ಏಕಾಗ್ರತೆಗೆ ಮೂಲ ಮೌನವೇ ಎನ್ನುವುದನ್ನು ನೆನಪಿನಲ್ಲಿಡಿ. ಕಾರಣ ನಮ್ಮೆಲ್ಲ ಸಾಧನೆಗೆ ಏಕಾಗ್ರತೆ ಬೇಕೇ ಬೇಕು. ಮೌನದಿಂದ ಮನಸ್ಸನ್ನು ಏಕಾಗ್ರಗೊಳಿಸುವುದು ನೂರಕ್ಕೆ ನೂರರಷ್ಟು ಸಾಧÀ್ಯ. ಓದುವ ಮಕ್ಕಳಿಂದ ಹಿಡಿದು ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ತಜ್ಞರಿಗೂ ಏಕಾಗ್ರತೆ ಅನಿವಾರ್ಯ. ಅವರೆಲ್ಲ ಪ್ರತಿದಿನ ಇಂತಿಷ್ಟು ಸಮಯ ಮೌನಕ್ಕೆ ಮೀಸಲಿರಿಸಿ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು.

ಜಾಣರ ನಾಲಿಗೆ ಹೃದಯದಲ್ಲಿರುತ್ತದೆ :

ಹೆಚ್ಚು ವಿಚಾರ ಮಾಡಿ, ಕಡಿಮೆ ಮಾತನಾಡುವುದನ್ನು ರೂಢಿಸಿಕೊಳ್ಳಿ. ಹೆಚ್ಚು ಮಾತನಾಡುವವರು ಕಡಿಮೆ ವಿಚಾರ ಮಾಡುತ್ತಾರೆ. ಸ್ವಲ್ಪ ಕೆಲಸ ಮಾಡುತ್ತಾರೆ ಎನ್ನುವುದು ಮಾಂಟೆಸ್ಸೊರಿಯವರ ಮಾತು. ಮೌನವೆಂದರೆ ಕೇವಲ ಮಾತನಾಡದಿರುವ ಸ್ಥಿತಿಯಲ್ಲ. ಯಾವುದೇ ವಿಚಾರವನ್ನು ಮಾಡದಿರುವ ಸ್ಥಿತಿ. ಪ್ರತಿ ಕ್ಷಣ ಹೊಳೆಯುವ ಯೋಚನೆ, ಆಲೋಚನೆಗಳಿಗೆ ಬ್ರೇಕ್ ಹಾಕುವುದೇ ಮೌನದ ಕೆಲಸ. ಮೌನವಾಗಿರುವವರು ಒಳ್ಳೆಯ ಕೇಳುಗರಾಗಿ ಬದಲಾಗುವುದರಲ್ಲಿ ಸಂಶಯವೇ ಇಲ್ಲ. ಮೂರ್ಖರು ಸದಾ ಬಾಯಿ ಮುಂದೆ ಮಾಡಿ ಒಡ ಒಡ ಎನ್ನುತ್ತ ಹುರುಳಿಲ್ಲದ ವಿಷಯಗಳ ಕುರಿತು ಮಾತನಾಡುವುದನ್ನು ಕಂಡು ಚರ್ಚಿಲ್‍ರು ಮೂರ್ಖರ ಹೃದಯ ಅವರ ನಾಲಿಗೆಯಲ್ಲಿರುತ್ತದೆ. ಜಾಣರ ನಾಲಿಗೆ ಅವರ ಹೃದಯದಲ್ಲಿರುತ್ತದೆ ಎಂದು ನುಡಿದಿದ್ದಾರೆ.

ಸಂತೃಪ್ತಿಗೆ ರಾಜ ಮಾರ್ಗ ಮೌನ : 

ಅರಿಯದೇ ಆಡುವ ಮಾತು ಪ್ರಾಣಕ್ಕೆ ಕುತ್ತು ತರುವುದುಂಟು. ಅದಕ್ಕೆ ಮಾತು ಮಾತಿಗೆ ತಕ್ಕ ಮಾತು ,ಕೋಟಿಗಳುಂಟು ಮಾತಾಡಿ ಮುನಿಸಕ್ಕು ಮಾತಿನಲಿ ಸೋತವನೆ ಜಾಣ ಎಂದು ಸರ್ವಜ್ಞ ಬಹಳ ಮಾರ್ಮಿಕವಾಗಿ ಹೇಳಿದ್ದಾನೆ. ಅತಿಯಾದ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕಾರಕ.ಅತಿಯಾದ ಮಾತು ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತದೆ. ಹಿತ ಮಿತವಾಗಿ ಮಾತನಾಡುವ ಮಿತ ಬಾಷಿಗಳನ್ನು ಎಲ್ಲರೂ ಇಷ್ಟ ಪಡುತ್ತಾರೆ. ಮೌನ ಪ್ರಿಯರಾದರೆ ಜಗಳದ ಗೊಡವೆಯೆ ಇಲ್ಲ.

ಮಹಾನುಭಾವರು ಮೌನಕ್ಕೆ ಶರಣಾದವರೆ. ಮೌನದಿಂದಲೇ ಅದಮ್ಯ ಶಕ್ತಿಯನ್ನು ಗಳಿಸಿದ ವೀರ ಪುರುಷರು ಅನೇಕರು. ನಮಗೆಲ್ಲ ಮೂಲವಾಗಿ ಬೇಕಾದ ಸಂತೃಪ್ತಿಗೆ ರಾಜ ಮಾರ್ಗವಾಗಿರುವ ಈ ಮೌನವನ್ನು ಸಾಧಿಸಲು ದಿನ ನಿತ್ಯದ ಪ್ರಾರ್ಥನೆ ಆಧ್ಯಾತ್ಮ ವಿಚಾರ, ಯೋಗ ನೆರವಾಗುವುವು. ಮೌನ ಶಿಷ್ಟಾಚಾರದ ಪ್ರಬಲ ಅಸ್ತ್ರವೂ ಹೌದು.  ಮಾತನಾಡಲು ಕಲಿಯಲು ಮೂರು ವರ್ಷಗಳು ಸಾಕು. ಯಾವಾಗ ಹೇಗೆ ಮಾತನಾಡುವುದು ಮತ್ತು ಯಾವಾಗ ಮೌನವಾಗಿರ ಬೇಕೆಂಬುದನ್ನು ಕಲಿಯಲು ಜೀವನ ಪೂರ್ತಿ ಸಾಕಾಗುವುದಿಲ್ಲ ಎನ್ನುವುದು ಬಲ್ಲವರ ಮಾತು. ಕಾರಣ ಮೌನವಾಗಿರುವುದು ಕಷ್ಟ ಸಾಧ್ಯ. ಕುಮಾರ ವ್ಯಾಸ ಹೇಳಿದಂತೆ ಬರಿಯ ಭಾಷಣದಿಂದೇನು ಪ್ರಯೊಜನ? ಮೌನವೆಂಬುದನ್ನು ನಮ್ಮ ನಡೆ, ನುಡಿಗಳಲ್ಲಿ ಆಚರಣೆಗೆ ತರುವುದು ಅನಿವಾರ್ಯವಾಗಿದೆ. ನಾವೆಲ್ಲರೂ ಅರಸುತ್ತಿರುವ ಮಾನಸಿಕ ನೆಮ್ಮದಿ ಸಂತೃಪ್ತಿ ನೀಡುವ ಮೌನಕ್ಕೆ ಮೊರೆ ಹೋಗುವದು ಒಳಿತಲ್ಲವೆ? ಮಾತನಾಡಿ ಹಗೆ ಸಾಧಿಸಿಕೊಳ್ಳುವುದಕ್ಕಿಂತ ಮೌನವಾಗಿದ್ದು ಮನ ಗೆಲ್ಲುವುದು ಒಳಿತು. ಈ ಸಪ್ತ ಸೂತ್ರದಂತಹ ಕಿವಿ ಮಾತುಗಳನ್ನು ಪಾಲಿಸಿ ದಿನದ ಕೆಲ ಹೊತ್ತು ಮೌನವಹಿಸಿ ಜೀವನದ ಸರಳತೆ ಸೌಂದರ್ಯವನ್ನು ಅನುಭವಿಸಿ ಸುಖ, ನೆಮ್ಮದಿ, ಸಂತ¸, ಸಂತೃಪ್ತಿಯನ್ನು ನಿಮ್ಮದಾಗಿಸಿಕೊಳ್ಳಿ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *