‘ಓಂ’ಕಾರ ಪಠಣದಿಂದ ಆರೋಗ್ಯದ ಈ ತೊಂದರೆಗಳೆಲ್ಲ ದೂರವಾಗುತ್ತವೆ ..!

ಹಿಂದು ಧರ್ಮದಲ್ಲಿ ಓಂ ಎಂಬ ಮಂತ್ರಕ್ಕೆ ತನ್ನದೇ ಆದ ಮಹತ್ವವಿದ್ದು ಇದರ ಉಚ್ಚಾರವಿಲ್ಲದೆ ಯಾವುದೇ ಪೂಜೆಗಳು ಸಂಪನ್ನಗೊಳ್ಳುವುದಿಲ್ಲ. ಓಂ ಕೇವಲ ಧಾರ್ಮಿಕ ಮಹತ್ವವುಳ್ಳ ಮಂತ್ರವಲ್ಲದೆ ಇದೊಂದು ಶಾರೀರಿಕವಾಗಿಯೂ ಶಕ್ತಿ ತುಂಬುವ ಪಠಣ ಎಂಬುದು ಮುಖ್ಯವಾಗುತ್ತದೆ. ಓಂ ಎಂಬ ಮಂತ್ರ ಪಠಣೆಯಿಂದ ನಮಗರಿವಿಲ್ಲದಂತೆಯೇ ಸಾಕಷ್ಟು ಉಪಯೋಗಗಳು ನಮಗಾಗುತ್ತವೆ. ಆದರೆ ಇದನ್ನು ನಿಯಮಿತವಾಗಿ ಪಠಿಸುವ ಅಭ್ಯಾಸ ರೂಢಿಸಿಕೊಂಡಾಗ ಇದರ ಲಾಭ ಗಣನೆಗೆ ಬರುತ್ತದೆ.  ಶರೀರದಲ್ಲಿನ ಸರ್ವರೋಗಗಳ ನಿಯಂತ್ರಣಕ್ಕೆ ಓಂ ಪಠಣ ಹೆಚ್ಚು ಉಪಯುಕ್ತವೆಂದರೆ ನಂಬಲು ಅಸಾಧ್ಯವಾಗಬಹುದು. ಆದರೆ ಇಂತಹ ಮಂತ್ರ ಪಠಿಸಿ ನಮ್ಮ ಪೂರ್ವಿಕರು, ಋಷಿಮುನಿಗಳು ಆರೋಗ್ಯಯುತವಾಗಿ ಜೀವನ ನಡೆಸಿದ ಅದೆಷ್ಟೋ ಉದಾಹರಣೆಗಳು ಕಣ್ಣ ಮುಂದಿವೆ.

ಓಂ ಉಚ್ಛಾರಣೆಯಿಂದ ಮೆದುಳು ಜಾಗೃತಿಗೊಂಡು ಗಂಟಲಿನಲ್ಲಿ ಕಂಪನ ಮುಖಾಂತರ ಇಡೀ ದೇಹದಲ್ಲಿ ಚೈತನ್ಯ ಮೂಡಿಸಲಿದೆ ಜೊತೆಗೆ ಸಕಾರಾತ್ಮಕ ಪರಿಣಾಮ ಉಂಟಾಗುವುದನ್ನು ಸ್ವತಃ ನಾವೇ ಅನುಭವಿಸಬಹುದು. ಅದಕ್ಕೂ ಮುನ್ನ ಓಂ ಮಂತ್ರ ಪಠಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ನಂತರ ಅದರಿಂದ ಉಂಟಾಗುವ ಪರಿಣಾಮಗಳನ್ನು ಗಮನಿಸಬೇಕು. ಮೊದಲೇ ಹೇಳಿದಂತೆ ಇದರಿಂದ ಸಾಕಷ್ಟು ರೋಗಗಳ ನಿಯಂತ್ರಣ ಸಾಧ್ಯವಿದೆ.  ಥೈರಾಡ್ ಗ್ರಂಥಿಗಳ ಮೇಲೆ ಓಂ ಉಚ್ಛಾರಣೆಯಿಂದ ಉಂಟಾಗುವ ಕಂಪನದಿಂದ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.

ಭಯ ಆವರಿಸಿರುವ ಮನಸ್ಸಿಗೆ ನೆಮ್ಮದಿ ನೀಡುವ ಮಂತ್ರ ಇದಾಗಿದೆ. ಯಾವುದೋ ಕಾರಣಕ್ಕೆ ಭಯಭೀತರಾದ ಸಂದರ್ಭದಲ್ಲಿ ಕಣ್ಣುಮುಚ್ಚಿಕೊಂಡು ಐದು ಬಾರಿ ದೀರ್ಘಶ್ವಾಸ ತೆಗೆದುಕೊಂಡು ಓಂ ಎಂದು ಉಚ್ಚರಿಸಬೇಕು. ಶರೀರದಲ್ಲಿ ವಿಷಕಾರಿ ಅಂಶಗಳಿದ್ದರೆ ಅದನ್ನು ದೂರ ಮಾಡಲು ಸಹ ಓಂ ಇಂದ ಸಾಧ್ಯವಾಗುತ್ತದೆ. ಹಾಗಾಗಿ ವಿಷಕಾರಿ ಅಂಶಗಳಾದ ಒತ್ತಡ, ಅವ್ಯಕ್ತ ಭಯ ಮುಂತಾದವು ಇದರಿಂದ ಕಡಿಮೆಯಾಗುತ್ತದೆ.  ಹೃದಯದ ಆರೋಗ್ಯಕ್ಕೂ ಓಂ ಉಚ್ಛಾರ ಸಹಕಾರಿ ಜೊತೆಗೆ ದೇಹದಲ್ಲಿ ರಕ್ತ ಸಂಚಾರ ಸುಗಮಗೊಳಿಸಲು ಇದು ನೆರವಾಗುತ್ತದೆ.

ಮನುಷ್ಯನಲ್ಲಿ ಆಹಾರ ವೈಪರೀತ್ಯದಿಂದ ಉದ್ಭವಿಸುವ ಪಚನ ಕ್ರಿಯೆಯ ತೊಂದರೆಯನ್ನು  ಓಂ ಉಚ್ಛಾರದಿಂದಾಗಿ ಸರಿಯಾಗಿಸಬಹುದು ಓಂ ಉಚ್ಛಾರ ಮಾಡುವುದರಿಂದ ಮನಸು ಉಲ್ಲಾಸಿತಗೊಂಡು ಸ್ಪೂರ್ತಿ ಪಡೆಯುತ್ತದೆ. ಹಾಗಾಗಿ ಉತ್ತಮ ರೀತಿಯಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಇಂತಹದೊಂದು ಅಭ್ಯಾಸದಿಂದ ಸಾದ್ಯವಿದೆ ಎಂಬುದನ್ನು ಅರಿಯಲೇ ಬೇಕು. ಆಯಾಸ ದೂರ ಮಾಡಲು ಸುಲಭವಾದ ಉತ್ತರವೆಂದರೆ ಓಂ ಉಚ್ಛಾರ ಮಾಡುವುದೇ ಆಗಿದೆ. ಮಾನಸಿಕ ಮತ್ತು ದೈಹಿಕ ಆಯಾಸದಿಂದ ಬಳಲಿದವರು ಓಂ ಉಚ್ಛಾರಣೆ ಮಾಡುವ ಮೂಲಕ ಆಯಾಸ ಪರಿಹರಿಸಿಕೊಳ್ಳಬಹುದು.

ಕೆಲವೊಮ್ಮೆ ನಿದ್ರೆ ಸರಿಯಾಗದೆ ಆಗುವ ತೊಂದರೆಗಳಿಗೂ ಓಂ ಉಚ್ಛಾರಣೆಯಿಂದ ನೆಮ್ಮದಿ ಮೂಡಿ ನಿದ್ರೆ ಆವರಿಸುವುದು. ಮನಸ್ಸಿಗೂ ನಿದ್ರೆಗೂ ಸಂಬಂಧವಿರುತ್ತದೆ. ಹಾಗಾಗಿ ಮನಸ್ಸು ಓಂ ಉಚ್ಛಾರಣೆಯಿಂದ ಶಾಂತಗೊಳ್ಳುತ್ತಿದ್ದಂತೆ ನಿದ್ರೆ ಸೆಳೆಯುತ್ತದೆ.  ಓಂ ಉಚ್ಛಾರಣೆಯನ್ನು ದೀರ್ಘವಾಗಿ ಉಸಿರೆಳೆಯುವ ಮೂಲಕ ಮಾಡಬೇಕಾಗಿರುವುದರಿಂದ ಶ್ವಾಸಕೋಶದ ತೊಂದರೆಗಳು ಬಹಳಷ್ಟು ಮಟ್ಟಿಗೆ ಕಡಿಮೆಯಾಗುತ್ತದೆ.  ನೇರವಾಗಿ ಬೆನ್ನು ಬಾಗಿಸದೆ ಕುಳಿತು ಓಂ ಉಚ್ಛಾರಣೆ ಮಾಡುವ ಪ್ರಕ್ರಿಯೆಯಿಂದ ಬೆನ್ನೆಲುಬುಗಳು ಗಟ್ಟಿಯಾಗಿ ಇದರಿಂದ ಬರುವ ನೋವು ಇನ್ನಿತರ ಸಮಸ್ಯೆ ನಮ್ಮಿಂದ ದೂರವೇ ಉಳಿಯುತ್ತದೆ.

ಇಷ್ಟೆಲ್ಲ ಅನುಕೂಲವಿರುವ ಓಂ ಉಚ್ಛಾರಣೆ ಹಲವರಿಗೆ ಮಾಹಿತಿ ಇಲ್ಲ ಎಂದಲ್ಲ. ಆದರೆ ಆ ಬಗ್ಗೆ ಆಸಕ್ತಿ ತಳೆಯದೇ ನಿರ್ಲಕ್ಷಿಸುವವರೇ ಹೆಚ್ಚು. ಸನಾತನ ಸಂಸ್ಕøತಿಯಿಂದ ಸಮೃದ್ಧವಾಗಿರುವ ಭಾರತದಲ್ಲಿ ಯೋಗ, ಧ್ಯಾನ ಮೊದಲಿನಿಂದಲೂ ಪ್ರಚಲಿತದಲ್ಲಿದೆ. ಅದರಲ್ಲಿ ಓಂ ಉಚ್ಛಾರಣೆ ಮಿಳಿತವಾಗಿದೆ. ಇದಷ್ಟೇ ಅಲ್ಲದೆ ನಮ್ಮ ಧಾರ್ಮಿಕ ಆಚರಣೆಗಳನ್ನು ಓಂ ಉಚ್ಛಾರಣೆಗೆ ಪ್ರಾಧಾನ್ಯತೆ ಇದೆ. ಹಾಗಾಗಿ ನಮ್ಮಲ್ಲೇ ಹಾಸುಹೊಕ್ಕಾಗಿರುವ ಓಂ ಮಂತ್ರ ಪಠಣವನ್ನು ಪ್ರತಿದಿನದ ಕ್ರಿಯೆಯಲ್ಲಿ ಅಳವಡಿಸಿಕೊಂಡರೆ ಆಗುವ ಉಯೋಗವೇ ಅಸಂಖ್ಯಾತ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *