ಮಂತ್ರಾಕ್ಷತೆಯ ಮಹತ್ವ ಗೊತ್ತೇ..?

ಧಾರ್ಮಿಕ ವಿಧಿವಿಧಾನಗಳಲ್ಲಿ ಬಳಸಲ್ಪಡುವ ಮಂತ್ರಾಕ್ಷತೆಗೆ ವಿಶಿಷ್ಟ ಅರ್ಥವಿದೆ. ಶ್ರೇಯಸ್ಸು, ಆಶೀರ್ವಾದದ ಪ್ರತೀಕ ಈ ಮಂತ್ರಾಕ್ಷತೆ ಎನ್ನಲಾಗುವುದು.
ಗುರು ರಾಘವೇಂದ್ರ ದೇವಾಲಯದಲ್ಲಿ ಮಂತ್ರಾಕ್ಷತೆಯ ಪ್ರಾಮುಖ್ಯತೆ ಅರಿವಿಗೆ ಬರುತ್ತದೆ. ಅದೇ ರೀತಿ ಹಲವಾರು ಸ್ಥಳಗಳಲ್ಲಿ ಮಂತ್ರಾಕ್ಷತೆಯನ್ನು ಬಳಸಲಾಗುತ್ತದೆ. ಆದರೆ ಇದರ ಒಳಅರ್ಥ ಮಾತ್ರ ಇಂದಿನ ಯುವಪೀಳಿಗೆಗೆ ತಿಳಿದಿಲ್ಲ.  ಗುರು-ಶಿಷ್ಯರ ಬಾಂಧವ್ಯದ ಸಂಕೇತವೂ ಆಗಿರುವ ಮಂತ್ರಾಕ್ಷತೆ ಮಠಕ್ಕೆ ಬರುವ ಶಿಷ್ಯರು ಗುರುಗಳಿಂದ ಆಶೀರ್ವಚನ, ಆಶೀರ್ವಾದ ಪಡೆದು ಮಂತ್ರಾಕ್ಷತೆಯೊಂದಿಗ ತೆರಳುವುದರಿಂದ ಬರಿಗೈಯಲ್ಲಿ ಹೋಗುವುದಿಲ್ಲ ಎಂಬ ವಾಡಿಕೆ ಇದೆ. ಬರುವಾಗ ಫಲ-ತಾಂಬೂಲವನ್ನು ತರುವ ಶಿಷ್ಯರು ಮಠದ ಗುರುಗಳಿಂದ ಮಂತ್ರಾಕ್ಷತೆ ಪಡೆದುಕೊಳ್ಳುವುದು ಸಂಪ್ರದಾಯ.

ಮೂಲತಃ ಮಂತ್ರಾಕ್ಷತೆ ಎಂಬ ಪದ ಮಂತ್ರ ಮತ್ತು ಅಕ್ಷತ ಎಂಬ ಎರಡು ಪದಗಳಿಂದ ಮೂಡಿರುವಂತಹದ್ದು. ಅಕ್ಷತವೆಂದರೆ ಅಖಂಡವೆಂದರ್ಥ. ತುಂಡು ಇಲ್ಲದೆ ಇರುವ ಪರಿಪೂರ್ಣದ ಸಂಕೇತ. ಮನುಷ್ಯನಿಗೆ ಜೀವನದಲ್ಲಿ ಪರಿಪೂರ್ಣತೆ ಬೇಕು. ಆರೋಗ್ಯ, ರೂಪ, ಆಯುಷ್ಯವಿರಬೇಕು ಆಗಲೇ ಪೂರ್ಣ.
ಯಾವುದನ್ನು ಮನನ ಮಾಡುವುದರಿಂದ ನಮ್ಮನ್ನು ರಕ್ಷಿಸುತ್ತದೋ ಅದು ಮಂತ್ರ. ಶಿಷ್ಯ ಅಥವಾ ಭಕ್ತನ ಕ್ಷೇಮಕ್ಕಾಗಿ, ಶ್ರೇಯಸ್ಸಿಗಾಗಿ ಗುರು ಮನಸ್ಸಿನಲ್ಲೇ ಮನನ ಮಾಡಿ ಅನುಗ್ರಹಿಸುವುದನ್ನು ಮಂತ್ರ ಎನ್ನಲಾಗುತ್ತದೆ. ಹಾಗಾಗಿ ಇವೆರಡರಿಂದ ಶ್ರೇಯಸ್ಸು ಲಭ್ಯ.

ಮಂತ್ರಾಕ್ಷತೆಯ ಫಲದ ಬಗ್ಗೆ ಹೇಳಬೇಕೆಂದರೆ ನಮ್ಮಲ್ಲಿ ಭಾವ ಎಷ್ಟಿದೆಯೋ, ಅಷ್ಟು ಫಲ ನೀಡುತ್ತದೆ. ಈ ಮಂತ್ರಾಕ್ಷತೆಯನ್ನು ನೆಚ್ಚಿದವರಿಗೆ ಸೋಲಿಲ್ಲ ಎಂದು ಹೇಳಲಾಗುತ್ತದೆ. ಗುರು ಪ್ರೀತಿಯ ಪ್ರತೀಕವಾದ ಮಂತ್ರಾಕ್ಷತೆ ನಮ್ಮ ಸಂಪ್ರದಾಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿದೆ.  ಇತರ ಅರ್ಥ ವ್ಯಾಪ್ತಿ ತಿಳಿದ ನಾವು ಇದನ್ನು ಬದುಕಿನ ಅವಿಭಾಜ್ಯವೆನಿಸುವುದು. ಭಾವ ಇರಲಿ, ಭಕ್ತಿ ಇರಲಿ ಜೀವನದಲ್ಲಿ ಇದಕ್ಕೆ ಔಷಧಿ ಎಂದರೆ ಮಂತ್ರಾಕ್ಷತೆ ಒಂದೇ. ಬದುಕಿನ ಎಲ್ಲಾ ಕ್ಲೇಶಗಳು ಮತ್ತು ಪ್ರಶ್ನೆಗಳಿಗೆ ಉತ್ತರಿಸುತ್ತಾ ಭವಸಾಗರವನ್ನು ಮಂತ್ರಾಕ್ಷತೆ ದಾಟಿಸುತ್ತದೆ. ಮಂತ್ರಾಕ್ಷತೆ ಎಂದಿಗೂ ನಿಮ್ಮ ಶಿರದ ಮೇಲಿರಲಿ.
ಮದುವೆ ಇನ್ನಿತರ ಶುಭ ಸಮಾರಂಭಗಳಲ್ಲಿ ಹಾರೈಕೆಯ ಸಂಕೇತವಾಗಿಯೂ ಅಕ್ಷತೆಯನ್ನು ಹಿರಿಯರು ಹಾಕುತ್ತಾರೆ. ಅವರಿಗಾಗಿ ದೇವರಲ್ಲಿ ಪ್ರಾರ್ಥಿಸಿ ಹಾಕುವ ಮಂತ್ರಾಕ್ಷತೆಗೆ ವಿಶಿಷ್ಟ ಸ್ಥಾನವಿದೆ. ಎಲ್ಲರ ಒಳಿತಿಗಾಗಿ ದೇವರ ಮೊರೆ ಹೋಗುವುದು ವಿಶೇಷ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *