ನೀವೂ ಪಾಲಿಸಿ ಜೀರೋ ವೇಸ್ಟ್ ಲೈಫ್‍ಸ್ಟೈಲ್

ವಿಶ್ವದ ಅನೇಕ ದೇಶಗಳನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಕಸ ವಿಲೇವಾರಿಯೂ ಒಂದು. ಇದು ಬೃಹದಾಕಾರವಾಗಿ ಬೆಳೆಯಲು ತ್ಯಾಜ್ಯ ಪ್ಲಾಸ್ಟಿಕ್ ವಸ್ತುಗಳೂ ದೊಡ್ಡ ಕೊಡುಗೆ ನೀಡಿವೆ. ಈ ಕಸ ಸಮಸ್ಯೆಗೆ ಮುಕ್ತಿ ಯಾವಾಗ..? ಇದರ ನಿವಾರಣೆಗೆ ಅನೇಕ ಪ್ರಯತ್ನಗಳು ಮುಂದುವರಿದಿವೆ. ನ್ಯೂಯಾರ್ಕ್ ಯುವತಿಯೊಬ್ಬಳು ತ್ಯಾಜ್ಯದಿಂದ ಮುಕ್ತಿ ಪಡೆಯಲು ವಿನೂತನ ವಿಧಾನ ಅಳವಡಿಸಿಕೊಂಡಿದ್ದಾಳೆ. ಅದುವೇ ಜೀರೋ ವೇಸ್ಟ್ ಲೈಫ್‍ಸ್ಟೈಲ್..!! ಅರ್ಥಾತ್ ಶೂನ್ಯ ತ್ಯಾಜ್ಯ ಜೀವನಶೈಲಿ.

ಐದು ವರ್ಷಗಳ ಹಿಂದೆ ನ್ಯೂಯಾರ್ಕ್ ನಗರಿಯ ಯುವತಿ ಲಾರೆನ್ ಸಿಂಗರ್ ಕಸದ ಸಮಸ್ಯೆಯಿಂದ ಬೇಸತ್ತಿದ್ದಳು. ಸ್ಟ್ರಾಗಳು, ಬಳಸಿ ಎಸೆಯುವ ರೇಜರ್‍ಗಳು, ಕಾಫಿ ಕಪ್‍ಗಳು, ಪ್ಲಾಸ್ಟಿಕ್ ಚೀಲಗಳಂಥ ತ್ಯಾಜ್ಯಗಳ ನಿವಾರಣೆಗಾಗಿ ಆಕೆ ಕಂಡುಕೊಂಡ ಹೊಸ ವಿಧಾನ ಝಿರೋ ವೇಸ್ಟ್ ಲೈಫ್‍ಸ್ಟೈಲ್..! ಏನಿದು ಝಡ್‍ಡಬ್ಲ್ಯುಎಲ್ ? ತ್ಯಾಜ್ಯಕ್ಕೆ ಆಸ್ಪದ ನೀಡದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ವಿನೂತನ ಪರಿಕಲ್ಪನೆ ಇದು..

ಕಳೆದ ಐದು ವರ್ಷಗಳಿಂದ ಈಕೆ ಉತ್ಪಾದಿಸಿದ ಎಲ್ಲ ಪ್ಲಾಸ್ಟಿಕ್ ತ್ಯಾಜ್ಯಗಳನ್ನು 16 ಔನ್ಸ್‍ಗಳ ಪುಟ್ಟ ಡಬ್ಬಿಯಲ್ಲಿ ತುಂಬಿಸಿ ಇಡಬಹುದಾಗಿದೆ. ಸಣ್ಣ ತ್ಯಾಜ್ಯ ಸಮಸ್ಯೆಗಳನ್ನು ಕೇವಲ ಪುನರ್‍ಬಳಕೆ ಅಥವಾ ತಗ್ಗಿಸುವ ಮೂಲಕ ನಿವಾರಿಸಬಹುದು. ಇದೇನು ದೊಡ್ಡ ಸಮಸ್ಯೆಯಲ್ಲ. ಆರಂಭದಲ್ಲೇ ಈ ಬಗ್ಗೆ ಕ್ರಮ ಕೈಗೊಂಡರೆ ಇದು ಬೃಹದಾಕಾರವಾಗಿ ಬೆಳೆಯುವುದನ್ನು ತಪ್ಪಿಸಬಹುದು. ನಿಮಗೆ ಇಷ್ಟವಿಲ್ಲದ ವಸ್ತುಗಳ ಬಳಕೆಯನ್ನು ಆದಷ್ಟು ನಿಯಂತ್ರಿಸುವುದರಿಂದ ತ್ಯಾಜ್ಯ ನಿವಾರಣೆ ಸಾಧ್ಯ ಎನ್ನುತ್ತಾಳೆ 26 ವರ್ಷದ ಸಿಂಗರ್. ಜನರು ಚಿಕ್ಕಪುಟ್ಟ ತ್ಯಾಜ್ಯರಹಿತ ಜೀವನ ನಡೆಸಲು ಮಾರ್ಗದರ್ಶನ ನೀಡಲು ಈಕೆ ಟ್ರಾಶ್ ಈಸ್ ಫಾರ್ ಟೋಸರ್ಸ್ ಎಂಬ ಬ್ಲಾಗ್‍ನನ್ನು ಆರಂಭಿಸಿದ್ದಾಳೆ. ಶೂನ್ಯ ತ್ಯಾಜ್ಯ ಜೀವನ ಶೈಲಿಯನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಅಂದರೆ ತ್ಯಾಜ್ಯವನ್ನು ಆರಂಭದಲ್ಲೇ ನಿವಾರಿಸಬೇಕು ಮತ್ತು ಅದು ಭರ್ತಿಯಾಗಲು ಅವಕಾಶ ನೀಡಬಾರದು ಎಂಬುದು ಇದರ ಅರ್ಥ ಎಂದು ಸಂದರ್ಶನವೊಂದರಲ್ಲಿ ವಿವರಿಸಿದ್ದಾಳೆ ಲಾರೆನ್ ಸಿಂಗರ್.

ಈಕೆ ಕಿರಾಣಿ ಅಂಗಡಿಗೆ ಹೋಗುವಾಗ ತನ್ನದೇ ಆದ ಮರುಬಳಕೆಯ ಹತ್ತಿ ಚೀಲವನ್ನು ಕೊಂಡೊಯ್ಯತ್ತಾಳೆ. ಸಾಧ್ಯವಾದಷ್ಟು ಪ್ಯಾಕ್ ಮಾಡದ ವಸ್ತುಗಳನ್ನು ಖರೀದಿಸುತ್ತಾಳೆ. ಇದರಿಂದ ಪ್ಲಾಸ್ಟಿಕ್ ಚೀಲಗಳ ಬಳಕೆ ತಪ್ಪುತ್ತದೆ. ಇದನ್ನು ಎಲ್ಲರೂ ಅನುಸರಿಸುವುದರಿಂದ ಕಸ ಸಮಸ್ಯೆ ನಿವಾರಿಸಬಹುದು ಎಂದು ಆಕೆ ಪ್ರತಿಪಾದಿಸಿದ್ದಾಳೆ. ಇದೇ ಕಾರಣಕ್ಕಾಗಿ ಆರು ತಿಂಗಳ ಹಿಂದೆ ಈಕೆ ತನ್ನದೇ ಆದ ಅಂಗಡಿಯನ್ನೂ ಆರಂಭಿಸಿದ್ದಾಳೆ. ನ್ಯೂಯಾರ್ಕ್‍ನ ಬ್ರೂಕ್ಲಿನ್ ಸಮೀಪದ ವಿಲಿಯಮ್ಸ್‍ಬರ್ಗ್‍ನಲ್ಲಿರುವ ಈ ಮಳಿಗೆ ಹೆಸರು ಪ್ಯಾಕೇಜ್ ಫ್ರೀ. ಹೆಸರಿಗೆ ಅನುಗುಣವಾಗಿ ಇಲ್ಲಿ ಪ್ಯಾಕ್ ಇಲ್ಲದ ವಸ್ತುಗಳದ್ದೇ ಕಾರುಬಾರು. ಜೈವಿಕ ಹತ್ತಿ, ಬಿದಿರು ಮತ್ತು ಸ್ಟೈನ್‍ಲೆಸ್ ಸ್ಟೀಲ್‍ನಿಂದ ತಯಾರಿಸಿದ ಉತ್ಪನ್ನಗಳು ಇಲ್ಲಿ ತುಂಬಾ ಕಡಿಮೆ ಬೆಲೆಗೆ ಲಭ್ಯ. ಅಲ್ಲದೇ ಪ್ಯಾಕಿಂಗ್ ಇಲ್ಲದ ಸೋಪ್‍ನಂಥ ಅನೇಕ ಬ್ಯೂಟಿ ಪ್ರಾಡಕ್ಟ್‍ಗಳೂ ಇಲ್ಲುಂಟು. ಸಿಂಗರ್ ತನ್ನ ರಿಟೈಲ್ ಸ್ಟೋರ್, ಬ್ಲಾಗ್ ಮತ್ತು ಯು ಟ್ಯೂಬ್ ಚಾನೆಲ್ ಮೂಲಕ ಕಸ ವಿಲೇವಾರಿ ಮತ್ತು ಶೂನ್ಯ ತ್ಯಾಜ್ಯ ಜೀವನಶೈಲಿ ಬಗ್ಗೆ ಜನರಿಗೆ ಸಲಹೆ ನೀಡುತ್ತಾ ಪರಿಸರ ರಕ್ಷಣೆ ಕಾಳಜಿಯಿಂದ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.

 

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *