ಅಡುಗೆ ಮನೆಯಲ್ಲೇ ಇದೆ ಆರೋಗ್ಯ, ಇದನ್ನೊಮ್ಮೆ ಟ್ರೈ ಮಾಡಿ ನೋಡಿ..

ಅನಾದಿಕಾಲದಲ್ಲಿ ಮನುಷ್ಯನಿಗೆ ಅನಾರೋಗ್ಯದ ಅರಿವೇ ಇರಲಿಲ್ಲವಂತೆ. ರೋಗವೇ ಇಲ್ಲವೆಂದಾದ ಮೇಲೆ ಔಷಧಿ ಅಗತ್ಯವಾದರೂ ಏಕೆ ಅಲ್ಲವೇ ? ಆಕಸ್ಮಿಕವಾಗಿ ಭೂಮಿಯ ಮೇಲೆ ಯಾರಿಗಾದರೂ ಆರೋಗ್ಯ ಕೆಟ್ಟರೆ ಚಿಕಿತ್ಸೆ ನೀಡಲು ದೇವಲೋಕದಿಂದ ದೇವತೆಗಳೆ ಬರಬೇಕಾಗಿತ್ತಂತೆ. ದಿನಕಳೆದಂತೆ ಪ್ರಕೃತಿಯಲ್ಲಿ ಅಡಗಿರುವ ಔಷಧ ಆಗರಗಳನ್ನು ಪತ್ತೆಪಾಡಿ ಬಳಸತೊಡಗಿದ.  ಆದಿಮಾನವ ಪ್ರಕೃತಿಯೊಂದಿಗೆ ಒಂದಾಗಿ ಸ್ವಚ್ಛಂದ ಬಾಳನ್ನು ಬಾಳುತ್ತಿದ್ದನು. ಆರೋಗ್ಯದ ಯಾವ ತೊಂದರೆಯೂ ಆತನನ್ನು ಭಾದಿಸುತ್ತಿರಲಿಲ್ಲ. ಸಣ್ಣ ಪುಟ್ಟ ತೊಂದರೆಗಳನ್ನು ಪ್ರಕೃತಿಯೇ ಸರಿಪಡಿಸುತ್ತಿತ್ತು. ಕಾಲಾಂತರದಲ್ಲಿ ಅಲೆಮಾರಿ ಜೀವನವನ್ನು ತೊರೆದು ಒಂದೆಡೆ ನೆಲೆನಿಂತನು. ಮಾನವ ನಾಗರಿಕನಾಗುತ್ತಾ ಪ್ರಕೃತಿಯಿಂದ ವಿಕೃತಿಯೆಡೆಗೆ ಸಾಗಿದ್ದು ದೊಡ್ಡ ದುರಂತವೇ ಸರಿ.

ನಾಗರಿಕಜೀವನ ಮಾನವನನ್ನು ಎಲ್ಲಾ ರೀತಿಯಲ್ಲೂ ಬದಲಾವಣೆ ಮಾಡಿತು. ಬೆಳವಣಿಗೆಗೆ ಹಾಗೂ ಬದಲಾವಣೆ ಅನಿವಾರ್ಯವು ಹೌದು ಅವಶ್ಯವೂ ಹೌದು. ಬದಲಾವಣೆಯೇ ದುರಂತಕ್ಕೆ ಎಡೆಮಾಡಿಕೊಡಬಾರದಲ್ಲವೆ. ಹಿಂದಿನ ಆಹಾರಪದ್ಧತಿ ಆರೋಗ್ಯಕ್ಕೆ ಪೂರಕವಾಗುವಂತೆ ಪ್ರಾದೇಶಿಕ ಪರಿಸರ ಹಾಗೂ ಋತುಮಾನಕ್ಕೆ ಅನುಗುಣವಾಗಿತ್ತು. ಜೀವನ ಶೈಲಿ ಬದಲಾದಂತೆ ಆಹಾರ ಸೇವನೆಯಲ್ಲಿ ಮಾತ್ರವಲ್ಲ ಅಭಿರುಚಿಯಲ್ಲೂ ಬದಲಾವಣೆಗಳಾದವು. ನಾಗರಿಕತೆ ಮಾನವನನ್ನು ಆರೋಗ್ಯದಿಂದ ಅನಾರೋಗ್ಯದೆಡೆಗೆ ಕರೆದೊಯ್ಯಿತು. ಆಗ ಪ್ರಕೃತಿಯ ಒಡಲಲ್ಲಿದ್ದ ಆರೋಗ್ಯದ ಗುಟ್ಟು ಮನುಷ್ಯನ ಸೇರುವಂತಾಯಿತು.

ಅನೇಕ ವೈದ್ಯಕೀಯ ಪದ್ಧತಿಗಳು ಅಸ್ತಿತ್ವಕ್ಕೆ ಬಂದವು. ಯಾವ ವೈದ್ಯಕೀಯ ಪದ್ಧತಿ ಇಲ್ಲದಿದ್ದರೂ. ಎಲ್ಲಾ ಔಷಧಿ ಅಂಗಡಿಗಳು, ದವಾಖಾನೆಗಳು ಮುಚ್ಚಿ ಹೋದರೂ 24 ಗಂಟೆ, 365ದಿನವೂ ಔಷಧಿದೊರಕುವ ಏಕೈಕ ಕ್ಲಿನಿಕ್ ಎಂದರೆ ಅಡುಗೆ ಮನೆ.  ಅಲ್ಲಿ ದೊರೆಯುವ ನೀರು, ಸಾಸಿವೆ, ಏಲಕ್ಕಿ, ಅರಿಶಿನ. ಜೀರಿಗೆ, ಮೆಂತ್ಯ, ಶುಂಠಿ, ಗಸಗಸೆ. ಕೊತ್ತಂಬರಿ ಬೀಜ, ಇಂಗು, ಬೆಳ್ಳುಳ್ಳಿ, ಬೆಲ್ಲ, ಉಪ್ಪು, ಕರಿ, ಬೇವು. ಅಂಜೂರ, ದ್ರಾಕ್ಷಿ, ಬಾದಾಮಿ, ಹಣ್ಣು, ತರಕಾರಿ, ಹೇಳುತ್ತಾ ಹೋದರೆ ಪಟ್ಟಿಯೂ ಬೆಳೆಯುತ್ತಾ ಹೋಗುತ್ತದೆ. ಅಡಿಗೆ ಮನೆಯಲ್ಲಿ ದೊರೆಯುವ ಪ್ರತಿಯೊಂದೂ ಪದಾರ್ಥ ತನ್ನದೇ ಆದ ಔಷಧೀಯಗುಣಗಳನ್ನು ಹೊಂದಿವೆ. ಕ್ಯಾನ್ಸರ್, ಜಾಂಡೀಸ್, ಅರ್ಥೋರೈಟೀಸ್ ನಂತಹ ಕಾಯಿಲೆಗಳಿಗೂ ಉತ್ತಮ ಔಷಧಿಗಳು ಅಡುಗೆ ಮನೆಯಲ್ಲಿವೆ. ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರತಿನಿತ್ಯ ಇವುಗಳನ್ನು ಬಳಸುತ್ತಾರೆ. ಪಾಶ್ಚಾತ್ಯರ ಪ್ರಭಾವ ಹಾಗೂ ಆಧುನಿಕತೆಯಿಂದ ಆಹಾರ ಪದ್ಧತಿಯಲ್ಲಿ ವ್ಯತ್ಯಯವಾಯಿತು. ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಿತು. ಅಡುಗೆ ಮನೆಯ ಸಾಮಾನುಗಳ ವೈಶಿಷ್ಟ್ಯ ತಿಳಿದವರಿಗೆ ಅದರ ಮಹತ್ವದ ಅರಿವಿರುತ್ತದೆ.

ಸಿಹಿ,ಹುಳಿ,ಉಪ್ಪು,ಖಾರ, ಒಗರು ಮತ್ತು ಕಹಿ ಎಂಬ ಆರು ರುಚಿಗಳೇ ಷಡ್ರಸಗಳು. ಪ್ರತಿ ನಿತ್ಯ ನಮ್ಮ ಅಡುಗೆ ಮನೆಯಲ್ಲಿ ಬಳಸುವಬೆಲ್ಲ, ಹುಣಸೆ ಹಣ್ಣು, ಅಡಿಗೆ ಉಪ್ಪು, ಮೆಣಸಿನ ಕಾಯಿ ಮತ್ತು ಕಾಳು ಮೆಣಸು, ಜೀರಿಗೆ ಮತ್ತು ಸಾಸಿವೆ ಹಾಗು ಮೆಂತ್ಯ ಈ ಆರೂ ಪದಾರ್ಥಗಳೂ ಔಷಧೀಯಗುಣದೊಂದಿಗೆ ವಿಭಿನ್ನ ರುಚಿಯನ್ನು ಹೊಂದಿವೆ. ಆರೂ ಪದಾರ್ಥುಗಳನ್ನು ಬಳಸಿ ತಯಾರಿಸುವ ಬೇಳೆ ಸಾರು ಷಡ್ರಸ ಪಾಕಕ್ಕೆ ಉತ್ತಮ ಉದಾಹರಣೆಯಾಗಿದೆ. ನಾಲಿಗೆಗೆ ರುಚಿ. ಶರೀರಕ್ಕೆ ಸೌಖ್ಯ.

ಸಾಸಿವೆ :

ತೀಕ್ಷ ದ್ರವ್ಯವಾಗಿದ್ದು ಖಾರ ಹೆಚ್ಚಿಸುವುದು. ಆಮ್ಲತೆಯನ್ನು ಹೆಚ್ಚಿಸುವುದು. ಹೈಡ್ರೋಕ್ಲೋರಿಕ್ ಆಸಿಡ್ ಇರುವುದರಿಂದ ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ. ನೋವು ನಿವಾರಕವಾಗಿಯೂ ಕೆಲಸಮಾಡುವುದು. ಹಿಡಿ ಸಾಸಿವೆ ಅರೆದು ಪೇಸ್ಟನ್ನು ಮಾಡಿಕೊಂಡು ಬಿಸಿಮಾಡಿ ನೋವು ಇರುವ ಭಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುವುದು. ಭುಜದ ನೋವಿಗೆ ಅತ್ಯಂತ ಸೂಕ್ತ ಔಷಧ, ಸಾಸಿವೆ ಎಣ್ಣೆಯನ್ನೂ ಸಹ ಬಳಸಬಹುದು.

ಏಲಕ್ಕಿ :

ಪಾಯಸ ಮೊದಲಾದ ಸಿಹಿ ತಿನಿಸುಗಳಿಗೆ ಪರಿಮಳ ನೀಡುತ್ತದೆ. ಅಜೀರ್ಣವಾಗದಂತೆ ಮಾಡುತ್ತದೆ. ಅಜೀರ್ಣದಿಂದುಂಟಾಗುವ ಹೊಟ್ಟೆ ತೊಳಸನ್ನು ತಪ್ಪಿಸುತ್ತದೆ, ತಲೆಸುತ್ತನ್ನು ನಿವಾರಿಸುತ್ತದೆ. ಸಮಾರಂಭಗಳಲ್ಲಿ ಊಟಮಾಡಿದ ನಂತರ ಏಲಕ್ಕಿಯನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಆಹಾರ ಜೀರ್ಣವಾಗುವುದು.

ಜೀರಿಗೆ :

ಆಮ್ಲತೆ ಕಡಿಮೆ ಮಾಡಿ, ಪಿತ್ತಹರ, ಪಿತ್ತದಿಂದ ಉಂಟಾದ ಕಾಯಿಲೆ ರೋಗವನ್ನು ಕಡಿಮೆ ಮಾಡುತ್ತದೆ. ಅಸಿಡಿಟಿಯನ್ನೂ ಕಡಿಮೆ ಮಾಡುತ್ತದೆ.
ಅರ್ಧ ಚಮಚ ಜೀರಿಗೆ 1 ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಆರಿಸಿ ಪ್ರತಿನಿತ್ಯ ಕುಡಿಯುವುದರಿಂದ ರಕ್ತಶುದ್ಧಿಯಾಗುತ್ತದೆ. 15 ರಿಂದ 20 ದಿನದವರೆಗೆ ಸೇವಿಸುವುದರಿಂದ ಚರ್ಮರೋಗವು ಕಡಿಮೆಯಾಗುತ್ತದೆ. ಅರ್ಧ ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ ಶೋಧಿಸಿ ಹಾಲು ಬೆರೆಸಿ ಕಷಾಯವನ್ನು ತಯಾರಿಸಿ ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ.
ಕೊತ್ತಂಬರಿ (ಧನಿಯಾ) :
ಒಂದು ಚಮಚ ನೀರನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಬೆಳಗ್ಗೆ ಕುಡಿಯುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ. ಅರ್ಧ ಚಮಚ ಈ ಕೊತ್ತಂಬರಿ ಮಿಶ್ರಣವನ್ನು ಅರ್ಧಲೋಟ ಹಾಲಿಗೆ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಅಲ್ಸರ್ ಮತ್ತು ಅಸಿಡಿಟಿ ಕಡಿಮೆಯಾಗುತ್ತದೆ.

ಬೆಳ್ಳುಳ್ಳಿ :

ಬಡವರ ಕಸ್ತೂರಿ, ಶೀತಹರ. ವಾಯುಹರ. 2-3 ಬೆಳ್ಳುಳ್ಳಿಯನ್ನು ಅರ್ಧಲೋಟ ಹಾಲಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಕುಡಿಯುವುದರಿಂದ ರೋಗ ನಿರೋಧಕ ಗುಣ ಹೆಚ್ಚುತ್ತದೆ. ಶೀತ ಕಡಿಮೆಯಾಗುತ್ತದೆ.

ಹೋಂ ಡಾಕ್ಟರ್ ಅರಿಶಿಣ

ಅಡುಗೆ ಮನೆಯಲ್ಲಿ ಸದಾಕಾಲ ಲಭ್ಯವಿರುವ ಸರ್ವ ರೋಗಗಳಿಗೆ ಮದ್ದು ಎಂದು ಕರೆಸಿಕೊಳ್ಳುವ ಅರಿಶಿನ ಆರೋಗ್ಯದ ವಿಷ್ಯದಲ್ಲಷ್ಟೇ ಅಲ್ಲದೇ ಸೌಂದರ್ಯದ ವಿಷಯದಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದೆ.  ಅರಿಶಿನ ಮತ್ತು ಹಳದಿ ಎಂದು ಕರೆಯಲ್ಪಡುವ ಈ ಮಸಾಲೆ ಪದಾರ್ಥವನ್ನು ಹಲವಾರು ಖಾದ್ಯಗಳಿಗೆ ಬಳಸುತ್ತಾರೆ. ಕೆಲವೊಂದು ಭಾರತೀಯಖಾದ್ಯಗಳ ರುಚಿಯನ್ನು ಹೆಚ್ಚಿಸುವುದರಲ್ಲಿ ಇದರ ಕೈವಾಡ ಇದೆ. ಆದ್ದರಿಂದಲೇ ಶತ ಶತಮಾನಗಳಿಂದ ಭಾರತೀಯ ಹೆಂಗಸರು ಅರಿಶಿನವನ್ನು ಮುಖಕ್ಕೆ ಬಳಿದುಕೊಳ್ಳುತ್ತಿದ್ದರು. ಇದರಲ್ಲಿರುವ ಆಂಟಿಸೆಪ್ಟಿಕ್ ಗುಣಗಳಿಂದಾಗಿ ಇದನ್ನು ಆಂತರಿಕವಾಗಿ (ಅಡುಗೆಯಲ್ಲಿ) ಮತ್ತು ಬಾಹ್ಯವಾಗಿ (ತ್ವಚೆಗೆ) ನಾವು ಬಳಸುತ್ತಿದ್ದೇವೆ. ಸೂಕ್ಷ್ಮ ತ್ವಚೆ ಇರುವವರನ್ನು ಹೊರತುಪಡಿಸಿ ಯಾರು ಬೇಕಾದರು ಅರಿಶಿನ ಬಳಸಬಹುದು.

ಅರಿಶಿನದಲ್ಲಿರುವ ಆಂಟಿ-ಸೆಪ್ಟಿಕ ಮತ್ತು ಆಂಟಿ-ಬ್ಯಾಕ್ಟೀರಿಯಾ ಗುಣಗಳು ಮೊಡವೆಗಳನ್ನು ನಾಶ ಮಾಡುತ್ತವೆ. ಹಾಗಾಗಿಯೇ ಭಾರತೀಯ ಮಹಿಳೆಯರು ಇದನ್ನು ಮುಖಕ್ಕೆ ಕ್ರೀಮ್ ಮತ್ತು ಫೇಸ್ ಪ್ಯಾಕ್‍ನಂತೆ ಹಚ್ಚಿಕೊಳ್ಳುವುದು. ಅರಿಶಿನ ಹಾಲು ಬ್ಯಾಕ್ಟಿರಿಯಾ ಮತ್ತು ವೈರಸ್ ಸೊಂಕುಗಳು ಆಕ್ರಮಿಸುವುದನ್ನು ವಿರೊಧಿಸುತ್ತದೆ. ಇದು ಉಸಿರಾಟ ಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ. ನಿಮ್ಮ ದೇಹ ಉಷ್ಣವಾಗಿದ್ದರೆ ಮತ್ತು ಉಸಿರಾಟ ಹಾಗೂ ಸೈನೆಸ್ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ಅಲ್ಲದೇ ಅಸ್ತಮಾ ಹಾಗೂ ಗಂಟಲೂತದಿಂದ ಕೂಡ ನಿವಾರಣೆ ಹೊಂದಬಹುದು.

ನೈಸರ್ಗಿಕವಾಗಿ ದೊರೆಯುವ ಅರಿಶಿನಕ್ಕೆ ನಮ್ಮಲ್ಲಿ ಬಹಳ ಬೇಡಿಕೆ. ಪೂಜೆ-ಪುನಸ್ಕಾರ, ಅಡುಗೆಯಲ್ಲಿ ಅರಿಶಿಣವನ್ನು ಬಳಸುತ್ತೇವೆ. ಮಾತ್ರವಲ್ಲ ಆರಿಶಿಣಕ್ಕೆ ನಮ್ಮಲ್ಲಿ ಒಂದು ಪವಿತ್ರ ಸ್ಥಾನ ಕಲ್ಪಿಸಿಕೊಟ್ಟಿದ್ದೇವೆ. ಮದುವೆಯಲ್ಲಿ ಅರಿಶಿಣ ಕೊಂಬನ್ನು ಕಟ್ಟುವ ಪದ್ಧತಿ ಹಲವು ಕಡೆ ಇದೆ. ಹಾಗಾಗಿ ಅರಿಶಿಣಕ್ಕೆ ಚಿನ್ನದ ಸ್ಥಾನಮಾನ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *